ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ: ಪತಿಯ ಕುಟುಂಬಸ್ಥರಿಂದಲೇ ಅಂತ್ಯಸಂಸ್ಕಾರ
ಹುಬ್ಬಳ್ಳಿ: ಹುಬ್ಬಳ್ಳಿಯ ವೀರಾಪುರದಲ್ಲಿ ತಂದೆಯಿಂದಲೇ ನಡೆದಿದ್ದ ಗರ್ಭಿಣಿ ಪುತ್ರಿಯ ಅಂತ್ಯಸಂಸ್ಕಾರವನ್ನು ಆಕೆಯ ಪತಿಯ ಕುಟುಂಬಸ್ಥರೇ ನೆರವೇರಿಸಿದ್ದು, ಮಗಳ ಅಂತಿಮ ದರ್ಶನಕ್ಕೂ ಕುಟುಂಬಸ್ಥರು ಆಗಮಿಸದಿರುವ ಹೃದಯ ಹಿಂಡುವ ಘಟನೆ ನಡೆದಿದೆ.
ಅನ್ಯಜಾತಿಯ ಯುವಕನ ಜತೆಗೆ ಮದುವೆಯಾಗಿರುವ ಕಾರಣಕ್ಕೆ ತಂದೆಯೇ ಈಗಾಗಲೇ ಏಳು ತಿಂಗಳ ಗರ್ಭಿಣಿಯಾಗಿದ್ದ 20 ವರ್ಷದ ಮಾನ್ಯಗಳನ್ನು ಕೊಲೆ ಮಾಡಿದ್ದ. ಕೊಲೆಯ ನಂತರ ತಂದೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ದಲಿತ ಸಂಘಟನೆಗಳ ಸಹಾಯದಿಂದ ಪತಿ ವಿವೇಕಾನಂದ ಕುಟುಂಬಸ್ಥರೇ ಆಕೆಯ ಅಂತಿಮ ಸಂಸ್ಕಾರ ನೆರವೇರಿಸಿದರು.
ಇನಾಂವೀರಾಪುರದ ಸ್ಮಶಾನದಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಪತಿ ವಿವೇಕಾನಂದ ನೋವಿನಿಂದಲೇ ಪತ್ನಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಗ್ರಾಮಸ್ಥರು, ದಲಿತ ಸಂಘಟನೆಗಳ ಮುಖಂಡರು ಮಾತ್ರವೇ ಭಾಗವಹಿಸಿದ್ದರು. ಅದೇ ಗ್ರಾಮದವರಾಗಿದ್ದರೂ, ಯುವತಿಯ ಕುಟುಂಬಸ್ರ್ಯಾರೂ, ಅಂತಿಮ ದರ್ಶನಕ್ಕೂ ಆಗಮಿಸಿರಲಿಲ್ಲ.


