ಹಾಸನ: ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ ಕರೆ: ಸಿಬ್ಬಂದಿಯಲ್ಲಿ ಆತಂಕ
ಹಾಸನ: ಜಿಲ್ಲೆಯ ಆಲೂರು ತಾಲೂಕು ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಬಂದಿದ್ದು, ಕ್ಷಣಕಾಲ ಆತಂಕಕ್ಕೆ ಕಾರಣವಾಗಿತ್ತು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿದ್ದು, ತಾಲೂಕು ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬರೆದಿತ್ತು. ಇದರಿಂದ ಆತಂಕಗೊAಡ ಸಿಬ್ಬಂದಿ, ಕಚೇರಿಯಿಂದ ಹೊರಗೆ ಓಡಿಬಂದಿದ್ದರು. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬಂದಿದ್ದ ಸಾರ್ವಜನಿಕರು ಕೂಡ ಗಾಬರಿಗೊಂಡಿದ್ದರು.
ಅನಂತರ ಪೊಲೀಸರು ಮತ್ತು ಬಾಂಬ್ ನಿಷ್ಕಿçಯ ದಳ ಸ್ಥಳಕ್ಕಾಗಮಿಸಿ, ಎಲ್ಲ ವಿದ್ಯುತ್ ದೀಪಗಳನ್ನು ನಂದಿಸಿ, ತಪಾಸಣೆ ನಡೆಸಿತು. ಆದರೆ, ಯಾವುದೇ ಬಾಂಬ್ ರೀತಿಯ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಇದೊಂದು ಹುಸಿ ಬಾಂಬ್ ಕರೆಯಾಗಿದ್ದು, ಯಾರೂ ಭಯಪಡಬೇಡಿ ಎಂದು ಪೊಲೀಸರು, ತಿಳಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಎಲ್ಲ ಸಿಬ್ಬಂದಿ ಮರಳಿ ಕೆಲಸಕ್ಕೆ ತೆರಳುವಂತೆ ಸೂಚನೆ ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇ-ಮೇಲ್ ವಿಳಾಸದ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.


