ಬೆಂಗಳೂರು: ಕೊಲೆ ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪತಿಯ ಜತೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ವಾರ್ ಜೋರಾಗಿರುವ ಸಂದರ್ಭದಲ್ಲಿ ವಿಜಯಲಕ್ಷ್ಮೀ ಭೇಟಿ ಮಹತ್ವ ಪಡೆದುಕೊಂಡಿದೆ. ಸುದೀಪ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದ ವಿಜಯಲಕ್ಷ್ಮೀ ಅವರ ಹೇಳಿಕೆ ಇದೀಗ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ಭೇಟಿ ಇದಾಗಿದೆ.
ದರ್ಶನ್ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದು, ಅವರ ಡೆವಿಲ್ ಚಲನಚಿತ್ರದ ಪ್ರಮೋಷನ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪತ್ನಿ ವಿಜಯಲಕ್ಷ್ಮೀ ವಹಿಸಿಕೊಂಡಿದ್ದಾರೆ. ಥಿಯೇಟರ್‌ಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಜತೆಗೆ ಸಂವಾದ ನಡೆಸಿ, ಸಿನಿಮಾದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಈ ನಡುವೆ ಸುದೀಪ್ ಫೈರಸಿ ಕುರಿತು ನೀಡಿದ ಹೇಳಿಕೆಯನ್ನು ವಿಜಯಲಕ್ಷ್ಮೀ ತಪ್ಪಾಗಿ ಅರ್ಥೈಸಿಕೊಂಡು ಟಾಂಗ್ ನೀಡಿದ್ದರು ಎನ್ನಲಾಗಿದೆ. ಇದು ಇಬ್ಬರು ನಟರ ನಡುವಿನ ವಾಗ್ವಾದಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಕಿಡಿ ಹೊತ್ತಿಸಿದೆ.

