ಅಪರಾಧ ಸುದ್ದಿ

ಉನ್ನಾವ್ ಅತ್ಯಾಚಾರ ಆರೋಪಿಯ ಜೀವಾವಧಿ ಶಿಕ್ಷೆ ರದ್ದು, ಜಾಮೀನು ಮಂಜೂರು

Share It

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ‘ಅಪರಾಧಿ’ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದ್ದು, ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ಸೆಂಗಾರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಮೂರು ಸಮಾನ ಶ್ಯೂರಿಟಿಗಳೊಂದಿಗೆ 15 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಆದೇಶಿಸಿದೆ. ಜತೆಗೆ, ಸಂತ್ರಸ್ತೆ ಮನೆಯ 5 ಕಿ.ಮೀ ವ್ಯಾಪ್ತಿಯಲ್ಲಿ ಬರಬಾರದು. ಆಕೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ನಾವು ಶಿಕ್ಷೆಯನ್ನು ರದ್ದುಗೊಳಿಸುತ್ತಿದ್ದೇವೆ. ಸಮಾನ ಮೊತ್ತದ ಮೂರು ಜಾಮೀನುಗಳೊಂದಿಗೆ 15 ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ದೆಹಲಿಯಲ್ಲೇ ಇರಬೇಕು. ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆಯ ಉಳಿದ ಭಾಗ ಪೂರ್ಣಗೊಳಿಸಲು ಸೆಂಗರ್ ಲಭ್ಯವಿರುವಂತೆ ನೋಡಿಕೊಳ್ಳಬೇಕು. ವಿಚಾರಣಾ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಸಲ್ಲಿಸಬೇಕು. ವಾರಕ್ಕೊಮ್ಮೆ ಪ್ರತಿ ಸೋಮವಾರ ಬೆಳಿಗ್ಗೆ 10ಕ್ಕೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು” ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ, ಯಾವುದೇ ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಪ್ರಕರಣದಲ್ಲಿ ಸೆಂಗಾರ್ ಅವರ ಅಪರಾಧ ಸಾಬೀತಾಗುವಿಕೆ ಮತ್ತು ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆ ಬಾಕಿ ಇರುವವರೆಗೆ ಅವರಿಗೆ ನೀಡಲಾದ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. 2019ರ ಡಿಸೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಸೆಂಗರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2017ರಲ್ಲಿ ಸೆಂಗಾರ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. 2019ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅತ್ಯಾಚಾರ ಪ್ರಕರಣ ಮತ್ತು ಸಂಬಂಧಿತ ಇತರ ಪ್ರಕರಣಗಳನ್ನು ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸಲಾಗಿತ್ತು.

ಸಂತ್ರಸ್ತೆ ತಂದೆ ಪೊಲೀಸ್ ವಶದಲ್ಲಿ ಸಾವು: ಅತ್ಯಾಚಾರ ಸಂತ್ರಸ್ತೆ ತಂದೆ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ತಮಗೆ ನೀಡಲಾದ ಶಿಕ್ಷೆ ವಿರುದ್ಧವೂ ಸೆಂಗಾರ್ ಸಲ್ಲಿಸಿದ ಮೇಲ್ಮನವಿ ವಿಚಾರಣೆ ಬಾಕಿ ಇದೆ. ಈಗಾಗಲೇ ಸಾಕಷ್ಟು ಸಮಯ ಜೈಲಿನಲ್ಲಿ ಕಳೆದಿರುವುದರಿಂದ ಶಿಕ್ಷೆ ಅಮಾನತುಗೊಳಿಸಬೇಕು ಎಂದು ಅವರು ಕೋರಿದ್ದಾರೆ. ಈ ಪ್ರಕರಣದಲ್ಲಿ ಸೆಂಗರ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.


Share It

You cannot copy content of this page