ಸುದ್ದಿ

ಜೈಲಿನಲ್ಲಿ AI ಕಣ್ಗಾವಲಿನ ಮೂಲಕ ನಿಗಾ: ನೂತನ ಡಿಜಿಪಿ ಅಲೋಕ್ ಕುಮಾರ್ ಪ್ರಯೋಗ

Share It

ಮಂಗಳೂರು: ಜೈಲಿನಲ್ಲಿ ಐಷರಾಮಿ, ನಿರ್ಬಂಧಿತ ವಸ್ತುಗಳು ಸಿಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಎಐ ಟೆಕ್ನಾಲಜಿ ಬಳಕೆ ಮಾಡಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ.

ಈ ಕುರಿತು ಮಾತನಾಡಿರುವ ನೂತನ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, ತಪಾಸಣೆಗೆ ಎಐ ಬಳಕೆ ಮಾಡಲಾಗುತ್ತದೆ. ಅದು ಎಷ್ಟು ಪರಿಣಾಮಕಾರಿ ಆಗುತ್ತದೆ ಎಂದು ನೋಡಿ ನಂತರ ಅಳವಡಿಕೆ ಮಾಡುತ್ತೇವೆ. ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಟ್ರಯಲ್ ಆಗಿದೆ.‌ ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡುತ್ತೇವೆ ಎಂದು ಕಾರಾಗೃಹ ವಿಭಾಗದ ನೂತನ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ 54 ಕಾರಾಗೃಹಗಳಿವೆ. ಎಲ್ಲಾ ಕಾರಾಗೃಹವನ್ನು ಸಮಯಕ್ಕೆ ಸರಿಯಾಗಿ ನೋಡಬೇಕು. ಮಂಗಳೂರಿನಲ್ಲಿ ಇರುವುದು ಸೂಕ್ಷ್ಮ ಕಾರಾಗೃಹ. ಈಗಾಗಲೇ ಇಲ್ಲಿ ರೈಡ್‌ಗಳನ್ನು ಮಾಡಲಾಗಿದೆ.‌ ಒಳಗಡೆ ಗಲಾಟೆ ಮಾಡಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನೊಂದಿಷ್ಟು ಕೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ ಎಂದರು‌.

ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ.‌ ಅದಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಚರ್ಚೆ ಮಾಡ್ತೇವೆ. ಜಾಮರ್ ಸಮಸ್ಯೆ ಬಗ್ಗೆ ಕಳೆದ 15ವರ್ಷಗಳಿಂದ ಕೇಳುತ್ತಿದ್ದೇನೆ. ಕಾಲಕಾಲಕ್ಕೆ ಬದಲಾವಣೆ ಆಗಿದೆ. ಆದರೆ ಇನ್ನೂ ಕೆಲವು ಸಮಸ್ಯೆಗಳು ಇವೆ. ನಿನ್ನೆ ಒಂದು ಮೊಬೈಲ್ ಫೋನ್ ಮಂಗಳೂರು ಜೈಲಿನಲ್ಲಿ ಸಿಕ್ಕಿದೆ.

ಮುಂದೆಯೂ ಪೊಲೀಸರು ಪರಿಶೀಲನೆ ಮಾಡುತ್ತಿರುತ್ತಾರೆ. ಜೈಲನ್ನು ಕಂಟ್ರೋಲ್‌ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ. ದೊಡ್ಡ ದೊಡ್ಡ ತರ್ಲೆ ಮಾಡುವವರೇ ಇಲ್ಲಿಗೆ ಬರುವುದು. ಬಳಿಕ ಜಾಮೀನು ಪಡೆದು ಹೊರಗೆ ಬರುತ್ತಾರೆ. ಇಲ್ಲಿಯೇ ನಾವು ಕಂಟ್ರೋಲ್‌ನಲ್ಲಿ ಇಟ್ಟರೆ ಸರಿಯಾಗುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು.


Share It

You cannot copy content of this page