ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಸರಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಡೆಲ್ಲಿ ಮತ್ತು ಆಂಧ್ರ ನಡುವಿನ ವಿಜಯ್ ಹಜಾರೆ ಟ್ರೋಪಿ ಪಂದ್ಯವನ್ನು ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಗಿದೆ.
ಕಾಲ್ತುಳಿತದ ಕಾರಣ ಹಾಗೂ ಪಂದ್ಯ ನಡೆಸಲು ಸಜ್ಜಿತ ವ್ಯವಸ್ಥೆಗಳಿಲ್ಲ ಎಂಬ ಕಾರಣ ನೀಡಿ, ಗೃಹ ಇಲಾಖೆ ನೇಮಿಸಿದ್ದ ಸಮಿತಿ ಪಂದ್ಯ ನಡೆಸಲು ಅನುಮತಿ ನಿರಾಕರಿಸಿತ್ತು. ಹೀಗಾಗಿ, ಇಂದು ನಡೆಯಬೇಕಿದ್ದ ಪಂದ್ಯವನ್ನು BCCI ನ ಸೆಂಟರ್ ಆಫ್ ಎಕ್ಸಲೆನ್ಸಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ವಿರಾಟ್ ಕೋಹ್ಲಿ ಪಂದ್ಯದಲ್ಲಿ ಆಡುತ್ತಿದ್ದು, ಪ್ರಮುಖ ಆಕರ್ಷಣೆಯಾಗಿದ್ದರು. ಪ್ರೇಕ್ಷಕರ ಅನುಪಸ್ಥಿತಿಯಲ್ಲಾದರೂ ಪಂದ್ಯಕ್ಕೆ ಅನುಮತಿ ನೀಡುವಂತೆ ಕೆಎಸ್ ಸಿಎ ಕೇಳಿಕೊಂಡಿತ್ತು. ಸೀಮಂತ್ ಕುಮಾರ್ ನೇತೃತ್ವದ ಸಮಿತಿ ಅನೇಕ ಕಾರಣಗಳನ್ನು ನೀಡಿ ಪಂದ್ಯಕ್ಕೆ ಅನುಮತಿ ನೀಡಲಿಲ್ಲ. ಹೀಗಾಗಿ, ಪಂದ್ಯ ಅನಿವಾರ್ಯವಾಗಿ ಶಿಫ್ಟ್ ಆಗಿದೆ.
ಕೊಡಿಗೆಹಳ್ಳಿ ಸಮೀಪದ ಬಿಸಿಸಿಐ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಈ ಹಿಂದೆ ಆಲೂರು ಮೈದಾನದಲ್ಲಿ ಪಂದ್ಯ ನಡೆಸಲು ಕೆಎಸ್ ಸಿಎ ತೀರ್ಮಾನಿಸಿತ್ತು. ಆದರೆ, ಕಾರಣಾಂತರದಿಂದ ಅದನ್ನು ಕೈಬಿಟ್ಟು, ಸೆಂಟರ್ ಆಫ್ ಎಲ್ಸಲೆನ್ಸಿ ಆಯ್ಕೆ ಮಾಡಿಕೊಂಡಿತು. ಇಲ್ಲಿಯೂ ಕೂಡ ಯಾವುದೇ ಪ್ರೇಕ್ಷಕರ ಪಂದ್ಯ ವೀಕ್ಷಣೆಗೆ ಅವಕಾಶ ನೀಡಿಲ್ಲ.

