ಬೆಂಗಳೂರು: ಯುವತಿಯನ್ನು ಮದುವೆ ಮಾಡಿಕೊಡುವಂತೆ ಪೀಡಿಸಿದ ವ್ಯಕ್ತಿಯೋರ್ವ ನಿರಾಕರಿಸಿದ ಆಕೆಯ ತಾಯಿಗೆ ಬೆಂಕಿ ಹಚ್ಚಿರುವ ಘಟನೆ ತಡರಾತ್ರಿ ಬೆಂಗಳೂರಿನ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ.
ಮುತ್ತು ಎಂಬಾತನೆ ಗೀತಾ ಎಂಬ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆರೋಪಿ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗೀತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಭೋವಿ ಪಾಳ್ಯದಲ್ಲಿ ಕಿರಾಣಿ ಅಂಗಡಿ ಹೊಂದಿದ್ದ ಗೀತಾ ತಮ್ಮ ಮಗಳೊಂದಿಗೆ ವಾಸವಿದ್ದರು. ಗೀತಾ ಅವರ ಅಂಗಡಿ ಸಮೀಪದಲ್ಲಿಯೇ ಟೀ ಶಾಪ್ ಹೊಂದಿದ್ದ ಮುತ್ತು ಅವರೊಂದಿಗೆ ಸಲುಗೆಯಿಂದ ಇದ್ದ. ಅಲ್ಲದೆ, ಇತ್ತೀಚೆಗೆ ಮುತ್ತು ಸಹ ಗೀತಾ ಅವರ ಮನೆಯಲ್ಲಿಯೇ ವಾಸಿಸಲು ಆರಂಭಿಸಿದ್ದ. ಈ ನಡುವೆ ಗೀತಾ ಅವರ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಆತ ಪೀಡಿಸಲಾರಂಭಿಸಿದ್ದ. ಆದರೆ ಆತನ ಕೋರಿಕೆಯನ್ನು ಗೀತಾ ನಿರಾಕರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಡರಾತ್ರಿ ಸಹ ಇದೇ ವಿಚಾರವಾಗಿ ಗೀತಾ ಹಾಗೂ ಮುತ್ತು ನಡುವೆ ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಮುತ್ತು, ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಮನೆಯಿಂದ ಕಾಲ್ಕಿತ್ತಿದ್ದಾನೆ. ಆರೋಪಿಯ ಕೃತ್ಯದಿಂದ ಗೀತಾ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿಯ ವಿರುದ್ಧ ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಠಾಣೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

