ಅಪರಾಧ ಸುದ್ದಿ

ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಸರಕಾರಿ ಬಸ್ಸು: ಸ್ಥಳದಲ್ಲೇ 9 ಜನರ ದುರ್ಮರಣ

Share It

ಕಡಲೂರು (ತಮಿಳುನಾಡು): ಭೀಕರ ರಸ್ತೆ ಅಪಘಾತದಲ್ಲಿ ಸರಕಾರಿ ಸಾರಿಗೆ ಬಸ್ಸೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ೯ ಜನರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಕಡಲೂರು ಜಿಲ್ಲೆ ತಿಟ್ಟಕುಡಿ ಬಳಿ ಕಳೆದ ರಾತ್ರಿ ನಡೆದಿದೆ.

ತಮಿಳುನಾಡು ರಾಜ್ಯ ಎಕ್ಸ್ಪ್ರೆಸ್ ಸಾರಿಗೆ ನಿಗಮದ ಬಸ್ ರಾತ್ರಿ ತಿರುಚ್ಚಿಯಿಂದ ಚೆನ್ನೈಗೆ ಹೊರಟಿತ್ತು. ಕಡಲೂರು ಜಿಲ್ಲೆ ತಿಟ್ಟಕುಡಿ ಬಳಿಯ ಉತ್ತೂರು ಪ್ರದೇಶದಲ್ಲಿ ಬಸ್ ಚಲಿಸುತ್ತಿದ್ದಾಗ ಬಸ್‌ನ ಮುಂಭಾಗದ ಟೈರ್ ಅನಿರೀಕ್ಷಿತವಾಗಿ ಸ್ಫೋಟವಾಗಿದೆ. ಪರಿಣಾಮ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ.

ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಮತ್ತು ಮಹಿಳೆಯರು ಸೇರಿ ೯ ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ತಿಟ್ಟಕುಡಿ ಮತ್ತು ರಾಮನಾಥಪುರಂ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಪೊಲೀಸರು ಸಾರ್ವಜನಿಕರ ಸಹಾಯದಿಂದ ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು. ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪೆರಂಬಲೂರು ಮತ್ತು ತಿಟ್ಟಕುಡಿ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂ.ಗಳನ್ನು ಪರಿಹಾರ ಘೋಷಣೆ ಮಾಡಿದ್ದಾರೆ.


Share It

You cannot copy content of this page