ಹಕ್ಕುಪತ್ರ ವಿತರಣೆಯಲ್ಲಿ ದಾಖಲೆ ಬರೆದ ಸರಕಾರ : 1.10 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಬೆಂಗಳೂರು: ಹಕ್ಕು ಪತ್ರ ವಿತರಣೆಯಲ್ಲಿ ಸರಕಾರ ಈವರೆಗೆ 1.10 ಲಕ್ಷ ಕುಡುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ನೆಮ್ಮದಿ ಮೂಡಿಸಿದೆ.
ಬಹುಕಾಲದಿಂದ ತಾಂಡ, ಹಟ್ಟಿ ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗೆ ದಾಖಲೆ ಇಲ್ಲದೆ ನೆಮ್ಮದಿಯ ಜೀವನ ಅಸಾಧ್ಯವಾಗಿತ್ತು. ಇಂತಹವರಿಗೆ ಹಕ್ಕುಪತ್ರ ಮತ್ತು ದಾಖಲೆಯನ್ನು ಒದಗಿಸಿಕೊಡಲು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ 2017ರಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರ ಮುಖಾಂತರ ಕಾಲಾನುಕಾಲದಿಂದ ಅತಂತ್ರದಲ್ಲಿ ಬದುಕುತ್ತಿದ್ದ ಕುಟುಂಬಗಳ ಸೂರಿಗೆ ದಾಖಲೆಗಳ ಗ್ಯಾರಂಟಿ ನೀಡುವ ಕೆಲಸ ಪ್ರಗತಿಯಲ್ಲಿದೆ.
ಈ ಕಾನೂನು 2017ರಲ್ಲಿ ತಿದ್ದುಪಡಿ ಆದ ನಂತರ 2023ರ ಮೇ ವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಮೇ 2023 ರಿಂದ 2025ರವರೆಗೆ 1.11 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ. ಮೇ 2025ರ ನಂತರ 1.10 ಲಕ್ಷ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಿ, 2026ರ ಫೆಬ್ರವರಿ ತಿಂಗಳ ಒಳಗಾಗಿ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.
ದಶಕಗಳ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯ ಕಂದಾಯ ಗ್ರಾಮ ರಚನೆ ಅಭಿಯಾನದ ಮುಖಾಂತರ ನಡೆಯುತ್ತಿದೆ. ದಾಖಲೆ ರಹಿತ ವಸತಿ ಪ್ರದೇಶ ಮತ್ತು ಮನೆಗಳನ್ನು ಗುರುತಿಸಿ ಸರ್ವೆ ಮಾಡಿ, ದಾಖಲೆಗಳನ್ನು ತಯಾರಿಸಿ, ಅಧಿಸೂಚನೆ ಹೊರಡಿಸಿ, ಹಕ್ಕುಪತ್ರ ನೀಡಿ, ಕ್ರಯಪತ್ರದಂತೆ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಯಲ್ಲಿ ಪಕ್ಕಾ ಖಾತೆ ಮಾಡುವುದರ ಮುಖಾಂತರ ಸಂಪೂರ್ಣ ಮಾಲಿಕತ್ವದ ಗ್ಯಾರಂಟಿ ನೀಡುವ ಈ ಕಾರ್ಯ ರಾಜ್ಯಾದ್ಯಂತ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದೆ.
ಬಹುತೇಕ ಬಡ ಕುಟುಂಬಗಳೇ ಇದರ ಫಲಾನುಭವಿಗಳಾಗಿದ್ದಾರೆ. ಯಾರಿಂದಲೂ ಅರ್ಜಿಗೆ ಕಾಯದೆ, ಕಂದಾಯ ಇಲಾಖೆಯ ಅಧಿಕಾರಿಗಳೇ ಸ್ವತಃ ಜನರ ಮನೆ ಬಾಗಿಲಿಗೆ ಹೋಗಿ ಇಷ್ಟೂ ಕೆಲಸವನ್ನು ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಆಗಿರುವ ಪ್ರಗತಿಯನ್ನುಒಳಗೊಂಡರೆ ಒಟ್ಟು 4 ಲಕ್ಷ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ನೀಡಿದಂತಾಗುತ್ತದೆ.


