‘ಪೆನ್ ಕದ್ದಿದ್ದೀಯಾ’ ಎಂದು 2ನೇ ತರಗತಿ ವಿದ್ಯಾರ್ಥಿಗೆ ಟಾರ್ಚರ್: ನಾಲ್ವರ ಮೇಲೆ FIR
ಕಾನ್ಪುರ: ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ ಕದ್ದಿದ್ದೀಯಾ ಎಂದು ಶಿಕ್ಷಕರು ನೀಡಿದ ಕಿರುಕುಳ ಆತನನ್ನು ಮಾನಸಿಕ ಹಿಂಸೆಗೆ ದೂಡಿದ್ದು, ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಲ್ಲಿನ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಗೆ ಪೆನ್ ಕದ್ದಿರುವ ವಿಚಾರಕ್ಕೆ ಆತನಿಗೆ ಮಾನಸಿಕ ಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕರು ನೀಡಿದ ಕಿರುಕುಳದಿಂದಾಗಿ ಬಾಲಕ ತನ್ನ ನೋಟ್ ಬುಕ್ ಮತ್ತು ತನ್ನ ಕೊಠಡಿಯ ಗೋಡೆಯ ಮೇಲೆಲ್ಲ ಹೆಲ್ಪ್ ಎಂದು ಬರೆದುಕೊಂಡು, ರಾತ್ರಿ ನಿದ್ರೆಯಲ್ಲೆಲ್ಲ ಪೆನ್ ಕದ್ದಿಲ್ಲ ಎಂದು ಕನವರಿಸುತ್ತಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ನಿದೇರ್ಶಕ ದೇವರಾಜ್ ಸಿಂಗ್ ರಜಾವತ್, ಪ್ರಾಂಶುಪಾಲರಾದ ಅನುಪ್ರೀತ್ ರಾವಲ್ ಮತ್ತು ಶಿಕ್ಷಕಿಯರಾದ ಸಂಗೀತಾ ಮಾಲಿಕ್ ಮತ್ತು ಸ್ವತಂತ್ರ ಅಗ್ನಿಹೋತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಇವರೆಲ್ಲರಿಗೂ ನೊಟೀಸ್ ನೀಡಿದ್ದರೂ, ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ಮಗುವಿನಿಂದ ಪೆನ್ ಕದ್ದಿರುವ ಬಗ್ಗೆ ತಪ್ಪೊಪ್ಪಿಗೆ ವಿಡಿಯೋ ಮಾಡಿಸಿದ್ದು, ಆ ವಿಡಿಯೋ ಮತ್ತು ಸಿಸಿಟಿವಿ ಫೋಟೇಜ್ ನೀಡಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ. ಮಗು ನಿದ್ರೆಯಲ್ಲಿ ಎದ್ದು ಅಮ್ಮ ನಾನು ಪೆನ್ ಕದ್ದಿಲ್ಲ ಎಂದು ಚೀರಾಡುತ್ತಿದೆ. ಗೋಡೆ ಮೇಲೆ, ಪುಸ್ತಕದ ಮೇಲೆ ಹೆಲ್ಪ್ ಎಂದು ಬರೆದುಕೊಳ್ಳುತ್ತಿದೆ ಎಂದು ಪೋಷಕರು ದೂರಿದ್ದಾರೆ.


