ಅಹಿಂದ ವ್ಯಾಖ್ಯಾನ: ಸಿಎಂ ಸಿದ್ಧರಾಮಯ್ಯಗೆ ಎಚ್.ಡಿ.ದೇವೇಗೌಡ ಸವಾಲು
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿ ಓದಿದೆ. ಅಹಿಂದದ ವ್ಯಾಖ್ಯಾನ ಏನು ಎಂಬುದನ್ನು ಅವರು ಹೇಳಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಅಹಿಂದ ಸಮಾವೇಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಕೂಡ ನಾನು ಓದಿದ್ದೇನೆ. ಜನವರಿ 25ರಂದು ಅಹಿಂದ ಸಮಾವೇಶ ಮಾಡುತ್ತಾರಂತೆ. ನಾವು 23ರಂದು ಹಾಸನದಲ್ಲಿ ಸಮಾವೇಶ ಮಾಡುತ್ತೇವೆ. ಈ ಅಹಿಂದಾ ವ್ಯಾಖ್ಯಾನ ಏನು? ಇಡೀ ದೇಶದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳಿಗೆ ಮೀಸಲು ಕೊಟ್ಟವರು ಯಾರು? ಮುಸ್ಲಿಮರಿಗೂ ಮೀಸಲು ಕೊಟ್ಟವರು ಯಾರು? ನಾಯಕ ಸಮಾಜಕ್ಕೆ ಮೀಸಲಾತಿ ಕೊಟ್ಟವರು ಯಾರು? ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ.
ನಾನು ವಸತಿ ಶಾಲೆಗಳನ್ನು ಕೊಟ್ಟೆ. ನಾನು ದೆಹಲಿಗೆ ಹೋದ ಮೇಲೆ ಇದೇ ಸಿದ್ದರಾಮಯ್ಯ ಹಣಕಾಸು, ಅಬಕಾರಿ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ಆಮೇಲೆ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ. ನಂತರ ಎಸ್.ಎಂ. ಕೃಷ್ಣ ಬಂದರು. ವಸತಿ ಶಾಲೆಗಳ ಕಥೆ ಏನಾಯಿತು? ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದು ನಾನು ಎಂದು ಹೇಳಲ್ಲ, ಅವರೇ ಹೇಳಿಕೊಳ್ಳಲಿ. ನನ್ನ ಬಗ್ಗೆ ಅವರು ಎಷ್ಟು ಬೇಕಾದರೂ ಕಠಿಣವಾಗಿ ಮಾತನಾಡಲಿ. ಈ ಅಹಿಂದವನ್ನು ಯಾವ ಲೇಬಲ್ ಇಟ್ಟುಕೊಂಡು ಮಾಡಿದಿರಿ? ಎಂದು ಪ್ರಶ್ನಿಸಿದರು.
ಒಳ ಮೀಸಲಾತಿಯಲ್ಲಿ ಯಾವ ಯಾವ ಸಮುದಾಯಕ್ಕೆ ಎಷ್ಟೆಷ್ಟು ಹೋಗಿದೆ ಎಂದು ಹೇಳಿದರೆ, ನಿಮ್ಮ ಬಜೆಟ್ ಗಳ ಬಗ್ಗೆ ಮಾತಾಡೋಣವ? ಚರ್ಚೆ ಮಾಡೋಣವಾ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿಗಳು ಸವಾಲು ಹಾಕಿದರು.


