ಚಿತ್ರದುರ್ಗದ ಅಪಘಾತದ ನಂತರವೂ ಬುದ್ಧಿ ಕಲಿಯದ ಸೀಬರ್ಡ್ ಬಸ್ ಚಾಲಕ:ಕುಡಿದು ಡ್ರೈವ್ ಮಾಡ್ತಿದ್ದವ ಪೊಲೀಸ್ರ ವಶಕ್ಕೆ..!
ಬೆಂಗಳೂರು: ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಚಿತ್ರದುರ್ಗದ ಹಿರಿಯೂರು ಬಳಿ ಅಪಘಾತಕ್ಕೀಡಾಗಿತ್ತು. ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಧ್ಯ ರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದಿತ್ತು.
ಈ ಅವಘಡದಲ್ಲಿ ಲಾರಿ ಚಾಲಕ, ಬಸ್ ಚಾಲಕ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೀಬರ್ಡ್ ಸಂಸ್ಥೆಗೆ ಸೇರಿದ ಬಸ್ ಇಷ್ಟು ದೊಡ್ಡ ಅಪಘಾತಕ್ಕೀಡಾಗಿದ್ದರೂ, ಒಂದಷ್ಟು ಚಾಲಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಇದೇ ಕಂಪನಿಯ ಬಸ್ ಚಾಲಕನೊಬ್ಬ ಕುಡಿದು ಬಸ್ ಡ್ರೈವ್ ಮಾಡುತ್ತಿದ್ದಾಗ ಬೆಂಗಳೂರು ಪೊಲೀಸರ ಕೈಯಿಗೆ ಸಿಕ್ಕಿಬಿದ್ದಿದ್ದಾನೆ..
ಬೆಂಗಳೂರಿನಿಂದ ಗೋವಾಕ್ಕೆ ಹೋಗುತ್ತಿದ್ದ ಸೀಬರ್ಡ್ ಟೂರಿಸ್ಟ್ ಬಸ್ ಚಾಲಕ ಮದ್ಯಪಾನ ಮಾಡಿ, ಬಸ್ ಡ್ರೈವ್ ಮಾಡುತ್ತಿದ್ದ. ಉಪ್ಪಾರಪೇಟೆ ಪೊಲೀಸರು ಬಸ್ ತಡೆದು ಡ್ರಂಕ್ & ಡ್ರೈವ್ ಟೆಸ್ಟ್ ಮಾಡಿದಾಗ ಆತ ಮದ್ಯ ಸೇವಿಸಿದ್ದು ಬೆಳಕಿಗೆ ಬಂದಿದೆ. ಇನ್ನು ಹೊಸವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾರ್ಟಿ ಮೂಡ್ ಜೋರಾಗಿದೆ. ಹೀಗಾಗಿ ಪೊಲೀಸರು ಅನೇಕ ಕಡೆಗಳಲ್ಲಿ ಈ ಡ್ರಂಕ್ & ಡ್ರೈವ್ ಟೆಸ್ಟ್ ಮಾಡುತ್ತಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಇದೇ ಸೀಬರ್ಡ್ ಬಸ್ ಅಪಘಾತಕ್ಕೀಡಾಗಿದೆ. ಅದು ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಆಗಿದ್ದಿರಬಹುದು. ಆದರೆ ಹೀಗೆ ಮದ್ಯ ಸೇವಿಸಿ ಬಸ್ ಚಾಲನೆ ಮಾಡುವುದು ಎಷ್ಟು ಸರಿ? ಕಣ್ಮುಂದೇ ಅಪಘಾತಗಳು ಸಂಭವಿಸುತ್ತಿದ್ದರೂ, ಜನರ ಜೀವದ ಜೊತೆ ಅನೇಕ ಚಾಲಕರು ಚೆಲ್ಲಾಟ ಆಡುತ್ತಿದ್ದಾರೆ. ಯಾವ ನಂಬಿಕೆ ಮೇಲೆ ಬಸ್‌ಗಳನ್ನ ಹತ್ತಬೇಕು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ..
ಬೆಂಗಳೂರು ನಗರದಲ್ಲಿ ಹೊಸವರ್ಷ ನಿಮಿತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪೊಲೀಸರು ವಾಹನ ಸವಾರರ ಮೇಲೆ ಕಣ್ಣಿಟ್ಟಿದ್ದಾರೆ. ಟ್ರಾಫಿಕ್ ಪೊಲೀಸರು ನಗರದಾದ್ಯಂತ ಸುಮಾರು 140 ಚೆಕ್‌ಪಾಯಿಂಟ್‌ಗಳನ್ನ ನಿರ್ಮಿಸಿದ್ದಾರೆ. ಶುಕ್ರವಾರ ರಾತ್ರಿ ಮೆಜೆಸ್ಟಿಕ್ ಪ್ರದೇಶದಲ್ಲಿ ಪೊಲೀಸರು ಎಂದಿನಂತೆ ಇನ್‌ಸ್ಪೆಕ್ಷನ್ ಮಾಡುತ್ತಿದ್ದರು.
ಆಗ ಅಲ್ಲಿಂದ ಹೊರಟಿದ್ದ ಸೀಬರ್ಡ್ ಬಸ್ ಕೂಡ ನಿಲ್ಲಿಸಿ, ಚಾಲಕನನ್ನ ಪರಿಶೀಲನೆ ಮಾಡಿದ್ದಾರೆ. ಬ್ರೀಥಲೈಸರ್ ಪರೀಕ್ಷೆ ನಡೆಸಿದಾಗ, ಚಾಲಕ ಮದ್ಯಪಾನ ಮಾಡಿದ್ದು ಸಾಬೀತಾಗಿದೆ. ಹೀಗಾಗಿ ಉಪ್ಪಾರಪೇಟೆ ಸಂಚಾರ ಪೊಲೀಸರು ತಕ್ಷಣವೇ ಚಾಲಕನನ್ನ ವಶಕ್ಕೆ ಪಡೆದು, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ, ಬಸ್ ಏಜೆನ್ಸಿಯನ್ನ ಸಂಪರ್ಕಿಸಿ, ಬೇರೊಬ್ಬ ಚಾಲಕನನ್ನ ಕಳಿಸಿಕೊಟ್ಟಿದ್ದಾರೆ.
ಬೆಂಗಳೂರಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಮಿತಿಮೀರಿದೆ. ಬೆಂಗಳೂರಲ್ಲಿ ಶುಕ್ರವಾರ ಸುಮಾರು 500 ಡ್ರಂಕ್ & ಡ್ರೈವ್ ಕೇಸ್‌ಗಳನ್ನ ಪೊಲೀಸರು ದಾಖಲಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ 2000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.


