ವಾಯುಮಾಲಿನ್ಯದ ವಿರುದ್ಧ ಹೋರಾಡಲು ನಿಮ್ಮ ಶ್ವಾಸಕೋಶವನ್ನ ಗಟ್ಟಿಗೊಳಿಸುವ ಆಹಾರಗಳು ಯಾವುವು ಗೊತ್ತೇ?
ದೇಶಾದ್ಯಂತ ಚಳಿಯ ಜತೆಯಾಗಿ ವಾಯುಮಾಲಿನ್ಯವೂ ವಿಪರೀತವಾಗಿದೆ. ಮಹಾನಗರಗಳಲ್ಲಂತೂ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ.
ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಉಬ್ಬಸ, ಅಸ್ತಮಾ, ಕೆಮ್ಮು, ಮೂಗು ಕಟ್ಟುವುದು, ತಲೆನೋವಿನಂಥ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಇಂಥ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು, ನಿಮ್ಮ ಶ್ವಾಸಕೋಶವನ್ನ ಇನ್ನಷ್ಟು ಬಲಿಷ್ಠ, ಆರೋಗ್ಯಯುತಗೊಳಿಸಿಕೊಳ್ಳಲು ಒಂದಷ್ಟು ಆಹಾರಗಳನ್ನ ನಿತ್ಯವೂ ಸೇವಿಸಬೇಕು.
ಈ ಕೆಳಗಿನ ಆಹಾರಗಳು ವಾಯು ಮಾಲಿನ್ಯದಿಂದ ನಿಮ್ಮ ದೇಹದ ಮೇಲೆ ಆಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು..
- ಶುಂಠಿ
ಚಳಿಗಾದಲ್ಲಿ ನಿಯಮಿತವಾಗಿ ಶುಂಠಿಯ ಸೇವನೆ ಮಾಡಬೇಕು. ಶುಂಠಿಯಲ್ಲಿ ಜಿಂಜರಾಲ್ಗಳು ಮತ್ತು ಫೀನಾಲಿಕ್ಗಳಂತಹ ಸಂಯುಕ್ತಗಳಿದ್ದು, ಇದು ಬಲಿಷ್ಠವಾದ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕವಾಗಿದೆ. ಮಾಲಿನ್ಯ ಹೆಚ್ಚಳದಿಂದ ನಿಮಗೆ ಕೆಮ್ಮು, ಕಫ ಕಟ್ಟುವ ಸಮಸ್ಯೆಗಳು ಉಂಟಾಗಿದ್ದರೆ, ಶುಂಠಿಯು ಅದನ್ನ ನಿವಾರಣೆ ಮಾಡುತ್ತದೆ. ಉಸಿರಾಟವನ್ನ ಸರಾಗ ಮಾಡುತ್ತದೆ. ನಿಯಮಿತವಾಗಿ ತಿನ್ನುತ್ತಿದ್ದರೆ ನೀವು ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಇಂಥ ಸಮಸ್ಯೆಗಳಿಂದ ದೂರವೇ ಇರ್ತೀರಿ. - ವಿವಿಧ ಬೀಜಗಳು
ನೀವು ಬಾದಾಮಿ, ವಾಲ್ನಟ್, ಅಗಸೆಬೀಜಗಳು, ಸೂರ್ಯಕಾಂತಿ ಬೀಜಗಳನ್ನ ಸೇವನೆ ಮಾಡಿ. ಇವು ಆರೋಗ್ಯಕರ ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ತುಂಬಿರುತ್ತವೆ, ಇದರಲ್ಲಿ ವಿಟಮಿನ್ ಇ, ಕೊಬ್ಬು ಕರಗುವ ಉತ್ಕರ್ಷಣ ನಿರೋಧಕವಾಗಿದ್ದು, ಸ್ವತಂತ್ರ ರಾಡಿಕಲ್ಗಳ ಋಣಾತ್ಮಕ ಪರಿಣಾಮಗಳಿಂದ ರಕ್ಷಿಸುತ್ತದೆ. ವಾಲ್ನಟ್ಸ್, ಅಗಸೆ ಬೀಜಗಳು ಮತ್ತು ಇತರ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಉಪಸ್ಥಿತಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಕಲುಷಿತ ಗಾಳಿಯಿಂದ ನಿಮ್ಮ ಹೃದಯರಕ್ತನಾಳಗಳನ್ನ ಕಾಪಾಡುತ್ತದೆ. - ಗ್ರೀನ್ ಟೀ
ಗ್ರೀನ್ ಟೀ ಒಂದು ಅದ್ಭುತ ಉತ್ಕರ್ಷಣ ನಿರೋಧಕ. ಇದರಲ್ಲಿರುವ ಕ್ಯಾಟೆಚಿನ್ಗಳಲ್ಲಿನ ಅತಿದೊಡ್ಡ ಅಣುವನ್ನು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅಥವಾ EGCG ಎಂದು ಕರೆಯಲಾಗುತ್ತದೆ. ಈ ವಸ್ತುಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ಪರಿಣಾಮಗಳನ್ನು ತಗ್ಗಿಸುತ್ತವೆ. ಜೀವಕೋಶದ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತವೆ. ಹಾಗೇ, EGCGಯು ಶ್ವಾಸಕೋಶವನ್ನ ಕಲುಷಿತ ಗಾಳಿ, ಮಾಲಿನ್ಯದಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಲವು ಅಧ್ಯಯನಗಳಲ್ಲಿ ಹೇಳಲಾಗಿದೆ. - ಅರಿಶಿಣ
ಹಳದಿ ಬಣ್ಣದ ಮಸಾಲೆಯು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ಪ್ರಬಲವಾದ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನ ಹೊಂದಿದೆ. ಕರ್ಕ್ಯುಮಿನ್ ಅಂಶವು ನೈಸರ್ಗಿಕ ಶುದ್ಧಿಕಾರಕವಾಗಿದೆ. ನೀವಿದನ್ನ ನಿಯಮಿತವಾಗಿ ತಿನ್ನುತ್ತ ಬಂದರೆ, ಶ್ವಾಸಕೋಶವು ಶುದ್ಧಗೊಂಡು, ಮಾಲಿನ್ಯದಿಂದ ಉಂಟಾಗುವ ಅನಾರೋಗ್ಯವನ್ನ ತಡೆಯುತ್ತದೆ. - ಸಿಟ್ರಸ್ ಹಣ್ಣುಗಳು
ಕಿತ್ತಳೆ ಮತ್ತಿತರ ಸಿಟ್ರಸ್ ಹಣ್ಣುಗಳನ್ನ ತಿನ್ನುತ್ತಿರಬೇಕು. ಇದರಲ್ಲಿರುವ ವಿಟಮಿನ್ ಸಿ ಅಂಶವು ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಅಂಶ ಜಾಸ್ತಿ ಇರುತ್ತದೆ. ಇವು ಶ್ವಾಸಕೋಶದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನ ನಿವಾರಿಸುತ್ತದೆ. ಈ ಮೂಲಕ ಶ್ವಾಸಕೋಶವನ್ನ ಸ್ವಚ್ಛವಾಗಿ ಇಡುತ್ತವೆ. - ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಹೆಚ್ಚಿನ ಮಟ್ಟದ ಆಂಥೋಸಯಾನಿನ್ ಅನ್ನು ಹೊಂದಿರುತ್ತವೆ. ಇದು ಒಂದು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ. ಈ ಉತ್ಕರ್ಷಣ ನಿರೋಧಕವು ವಿಟಮಿನ್ ಸಿ ಯೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುವ ಪಟ್ಟಿಯಲ್ಲಿ ಬೆರ್ರಿಗಳು ಮೊದಲ ಸ್ಥಾನದಲ್ಲಿವೆ. ಅವುಗಳ ಹೆಚ್ಚಿನ ಉರಿಯೂತದ ಗುಣಲಕ್ಷಣಗಳು ವಾಯು ಮಾಲಿನ್ಯದಿಂದ ಕಿರಿಕಿರಿಗೊಂಡ ಶ್ವಾಸಕೋಶಗಳನ್ನು ಪರಿಣಾಮಕಾರಿಯಾಗಿ ಶಮನಗೊಳಿಸುತ್ತವೆ.


