ಉಪಯುಕ್ತ ಸುದ್ದಿ

ಡಿಸೆಂಬರ್ 31ರೊಳಗೆ ಆಧಾರ್–ಪ್ಯಾನ್ ಜೋಡಣೆ ಕಡ್ಡಾಯ: ವಿಳಂಬವಾದರೆ ಹಣಕಾಸು ವ್ಯವಹಾರಕ್ಕೆ ಅಡ್ಡಿ

Share It

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪರಸ್ಪರ ಜೋಡಿಸಲು ಡಿಸೆಂಬರ್ 31 ಕೊನೆಯ ಗಡುವಾಗಿದೆ. ಈ ಅವಧಿಯೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ 2026ರ ಜನವರಿ 1ರಿಂದ ಹಣಕಾಸಿನ ವಹಿವಾಟುಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ವಿಶೇಷವಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ, ರಿಫಂಡ್ ಪಡೆಯುವುದು ಸೇರಿದಂತೆ ಹಲವು ಹಣಕಾಸು ಸೇವೆಗಳಲ್ಲಿ ತೊಂದರೆ ಉಂಟಾಗಬಹುದು. ಜತೆಗೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುವ ಸಾಧ್ಯತೆಯೂ ಇದೆ. ನಿಷ್ಕ್ರಿಯಗೊಂಡ ಪ್ಯಾನ್ ಅನ್ನು ಮರುಸಕ್ರಿಯಗೊಳಿಸಲು ₹1,000 ದಂಡ ಪಾವತಿಸಬೇಕಾಗುತ್ತದೆ.

ಯಾರಿಗೆ ಅನ್ವಯಿಸುತ್ತದೆ?
2024ರ ಅಕ್ಟೋಬರ್ 1ರೊಳಗೆ ಆಧಾರ್ ನೋಂದಣಿ ಮಾಡಿಕೊಂಡಿರುವವರು ಡಿಸೆಂಬರ್ 31ರೊಳಗೆ ಆಧಾರ್–ಪ್ಯಾನ್ ಲಿಂಕ್ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಆಧಾರ್ ನೋಂದಣಿ ಐಡಿ ಆಧಾರವಾಗಿ ಪ್ಯಾನ್ ನೀಡಲಾಗಿದ್ದರೂ, ಅದು ಮಾನ್ಯವಾಗಿರಲು ಎರಡನ್ನೂ ಜೋಡಿಸುವುದು ಅಗತ್ಯ.

ಆಧಾರ್–ಪ್ಯಾನ್ ಲಿಂಕ್ ಮಾಡುವ ವಿಧಾನ:

  • ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ:(https://www.incometax.gov.in/iec/foportal/)
  • ‘ಕ್ವಿಕ್ ಲಿಂಕ್’ ವಿಭಾಗದಲ್ಲಿ ‘ಲಿಂಕ್ ಆಧಾರ್’ ಆಯ್ಕೆಮಾಡಿ.
  • ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು, ಆಧಾರ್ ಸಂಖ್ಯೆ ಹಾಗೂ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
  • ಆಧಾರ್‌ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ.
  • ‘ವ್ಯಾಲಿಡೇಟ್’ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ದೃಢೀಕರಣ ಸಂದೇಶ ಬಂದ ನಂತರ 3–4 ದಿನಗಳಲ್ಲಿ ಲಿಂಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಈಗಾಗಲೇ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

  • ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ‘ಕ್ವಿಕ್ ಲಿಂಕ್’ ಆಯ್ಕೆ ಮಾಡಿ, ನಂತರ ‘ಆಧಾರ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ.
  • ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ.
  • ನಿಮ್ಮ ಪ್ಯಾನ್ ಆಧಾರ್‌ಗೆ ಜೋಡಣೆಯಾಗಿದೆ ಅಥವಾ ಇಲ್ಲವೋ ಎಂಬ ಮಾಹಿತಿ ಪರದೆಯಲ್ಲಿ ಕಾಣಿಸುತ್ತದೆ.

ಗಡುವಿನೊಳಗೆ ಲಿಂಕ್ ಪ್ರಕ್ರಿಯೆ ಮುಗಿಸಿ, ಭವಿಷ್ಯದ ಹಣಕಾಸು ತೊಂದರೆಗಳನ್ನು ತಪ್ಪಿಸಿಕೊಳ್ಳಿ.


Share It

You cannot copy content of this page