ಉಪಯುಕ್ತ ಸುದ್ದಿ

ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಜ್ಜು: ಭದ್ರತೆ, ಸಂಚಾರ ಮತ್ತು ಮಹಿಳಾ ಸುರಕ್ಷತಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಆದೇಶ

Share It

ಬೆಂಗಳೂರು: ಹೊಸ ವರ್ಷ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮ ಸುರಕ್ಷಿತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಮಾತನಾಡಿದ ಸಿಎಂ, ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು ಎಂದು ಹೇಳಿದರು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿ, ತಕ್ಷಣ ಸ್ಪಂದಿಸುವ ವ್ಯವಸ್ಥೆ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ವರ್ಷ ಸಂಭ್ರಮದ ಬಳಿಕ ಸಾರ್ವಜನಿಕರು ಸುರಕ್ಷಿತವಾಗಿ ಮನೆಗಳಿಗೆ ಮರಳಲು ಅನುಕೂಲವಾಗುವಂತೆ ಹೆಚ್ಚುವರಿ ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸುವಂತೆ ಆದೇಶಿಸಲಾಯಿತು. ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ವಾಣಿಜ್ಯ ಹಾಗೂ ಮನರಂಜನಾ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನ ಬಳಸುವಂತೆ ಸೂಚನೆ ನೀಡಲಾಯಿತು.

ಭದ್ರತಾ ದೃಷ್ಟಿಯಿಂದ ನಗರಾದ್ಯಂತ ಸುಮಾರು 20,000 ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ಇತರ ಜಿಲ್ಲೆಗಳಿಂದ 1,200 ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಕರೆತರಲಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿ, ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

ನಗರದಲ್ಲಿ ಹೊಸ ವರ್ಷಾಚರಣೆ ಸುಗಮವಾಗಲು 4 ಕಂಟ್ರೋಲ್ ರೂಂಗಳು, 78 ಕಾವಲು ಗೋಪುರಗಳು, 164 ಮಹಿಳಾ ಸಹಾಯ ಕೇಂದ್ರಗಳು ಹಾಗೂ 55 ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 3,500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಹೊಸ ವರ್ಷದ ರಾತ್ರಿ ನಗರದಲ್ಲಿನ 50 ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು.

ಇದಕ್ಕೂ ಮುಂದಾಗಿ, ಕಿಡಿಗೇಡಿಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಬೇಕು, ವ್ಹೀಲಿಂಗ್‌ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಿಎಂ ಎಚ್ಚರಿಸಿದರು. ಮಾದಕ ದ್ರವ್ಯಗಳ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು; ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page