ಹೊಸ ವರ್ಷವನ್ನು ಶಾಂತವಾಗಿ, ಪ್ರಕೃತಿಯ ಮಡಿಲಲ್ಲಿ ಆಚರಿಸಬೇಕು ಎನ್ನುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಯೋಜನೆ ರೂಪಿಸುತ್ತಾರೆ. ಜನಜಂಗುಳಿ ತಪ್ಪಿಸಿ ಬೆಟ್ಟ, ಜಲಪಾತ, ಅರಣ್ಯ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಡಿಸೆಂಬರ್ 31 ಮತ್ತು ಜನವರಿ 1ರಂದು ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ನಿರ್ಬಂಧಿತ ಪ್ರವಾಸಿ ಸ್ಥಳಗಳು
ನಂದಿ ಬೆಟ್ಟ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟವು ವರ್ಷಪೂರ್ತಿ ಪ್ರವಾಸಿಗರ ನೆಚ್ಚಿನ ತಾಣ. ಹೊಸ ವರ್ಷದ ಹಿನ್ನಲೆಯಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮುಂಗಡವಾಗಿ ಅತಿಥಿ ಗೃಹ ಅಥವಾ ಹೋಟೆಲ್‌ಗಳನ್ನು ಬುಕ್ ಮಾಡಿಕೊಂಡಿರುವವರನ್ನು ಹೊರತುಪಡಿಸಿ, ಡಿಸೆಂಬರ್ 31 ಮಧ್ಯಾಹ್ನ 2 ಗಂಟೆಯಿಂದ 2026 ಜನವರಿ 1 ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಣಗಳು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿಗೂ ಹೊಸ ವರ್ಷದ ಸಂದರ್ಭದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಕಾಮೇನಹಳ್ಳಿ ಬಳಿಯ ಡೈಮಂಡ್ ಫಾಲ್ಸ್, ಮೂಡಿಗೆರೆ ತಾಲ್ಲೂಕಿನ ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್, ಕುಡಿಗೆ ಫಾಲ್ಸ್, ಕಳಸ ತಾಲ್ಲೂಕಿನ ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ, ಅಬ್ಬುಗುಡಿಗೆ ಫಾಲ್ಸ್, ಕಡೂರು ತಾಲ್ಲೂಕಿನ ಅಯ್ಯನಕೆರೆ, ಮದಗದಕೆರೆ, ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಹಾಗೂ ಹೆಬ್ಬೆ ಫಾಲ್ಸ್ ಸೇರಿ ಹಲವು ಸ್ಥಳಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆಯವರೆಗೆ ಈ ಎಲ್ಲಾ ತಾಣಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಆನ್‌ಲೈನ್ ಮೂಲಕ ಈಗಾಗಲೇ ಹೋಂ ಸ್ಟೇ ಅಥವಾ ರೆಸಾರ್ಟ್‌ಗಳನ್ನು ಬುಕ್ ಮಾಡಿಕೊಂಡಿರುವ ಪ್ರವಾಸಿಗರಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಇತರೆ ಎಲ್ಲರಿಗೂ ಈ ನಿರ್ಬಂಧ ಅನ್ವಯವಾಗಲಿದೆ.

