ಅಪರಾಧ ಸುದ್ದಿ

ರಸ್ತೆಯಲ್ಲಿಯೇ ರಾಡ್ ನಿಂದ ಹೊಡೆದು ವ್ಯಕ್ತಿಯ  ಕೊಲೆ

Share It

ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ವ್ಯಕ್ತಿಯೋರ್ವನನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟಮೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಂಭಾಗ ಮಂಗಳವಾರ ರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಶಿವಮೊಗ್ಗದ ಕಾಶಿಪುರ ಬಡಾವಣೆಯ ತಮಿಳು ಕ್ಯಾಂಪ್‌ ನಿವಾಸಿ ಅರುಣ್ (26) ಎಂದು ಗುರುತಿಸಲಾಗಿದೆ. ಈತ ಗಾರೆ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ 8:45ರಲ್ಲಿ ತನ್ನ ಬೈಕ್​ನಲ್ಲಿ ಎಪಿಎಂಪಿ ತರಕಾರಿ ಮಾರುಕಟ್ಟೆ ಬಳಿ ಶ್ರೀನಿಧಿ ವೈನ್ಸ್ ಮುಂಭಾಗ ಬಂದಿದ್ದ. ಬೈಕ್ ನಿಲ್ಲಿಸುತ್ತಿದ್ದಂತೆಯೇ ಹಿಂದಿನಿಂದ ಇನ್ನೊಂದು ಬೈಕ್​ನಲ್ಲಿ ಬಂದ ಇಬ್ಬರು ರಾಡ್​​ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ.

ಇದರಿಂದ ಅರುಣ್​ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.‌ ಹಲ್ಲೆ ನಡೆಸಿದವರು ಕೆಲ‌ಕಾಲ ಅಲ್ಲೇ ನಿಂತು, ಬಳಿಕ ಅರುಣ್​​ ತಂದಿದ್ದ ಬೈಕ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿನೋಬನಗರ ಠಾಣೆ ಪೊಲೀಸರು ಪರಿಶೀಲಿಸಿದಾಗ ಅರುಣ್​ ಮೃತದೇಹ ಸ್ಥಳದಲ್ಲೇ ಬಿದ್ದಿತ್ತು. ತಕ್ಷಣ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್​​ಪಿ, ಇತರ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.


Share It

You cannot copy content of this page