ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಬಹಳ ದಿನಗಳಿಂದ ಗಿಲ್ಲಿ ಕ್ಯಾಪ್ಟನ್ ಆಗಬೇಕು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದು ಖುಷಿಯ ವಿಷಯವಾಗಿತ್ತು. ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಮನೆಯವರು ಕೂಡ ಮುಂದಿನ ಕ್ಯಾಪ್ಟನ್ ಆಗಿ ಗಿಲ್ಲಿಯನ್ನೇ ಬೆಂಬಲಿಸಿದ್ದರು. ಆದರೆ ಅಂತಿಮವಾಗಿ ಅಶ್ವಿನಿ ಗೌಡ ಜೊತೆ ನಡೆದ ಟಾಸ್ಕ್‌ನಲ್ಲಿ ಗೆದ್ದು ಗಿಲ್ಲಿ ಕ್ಯಾಪ್ಟನ್ ಸ್ಥಾನ ಪಡೆದುಕೊಂಡರು.
ಆದರೆ ಕ್ಯಾಪ್ಟನ್ ಆದ ಬಳಿಕ ಗಿಲ್ಲಿಯ ವರ್ತನೆ ಬದಲಾಗಿದೆ ಎನ್ನುವ ಮಾತುಗಳು ಜೋರಾಗಿವೆ. ಕೆಲಸದ ವಿಚಾರದಲ್ಲಿ ಅಶ್ವಿನಿ ಜೊತೆ ನಡೆದ ವಾಗ್ವಾದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ. ಅದರ ಜೊತೆಗೆ ನಾಮಿನೇಷನ್ ಮತ್ತು ಟಾಸ್ಕ್‌ಗಳ ಜಡ್ಜ್‌ಮೆಂಟ್‌ನಲ್ಲಿ ಗಿಲ್ಲಿ ಹೆಚ್ಚಾಗಿ ಕಾವ್ಯಾ ಪರ ನಿಲ್ಲುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇತ್ತೀಚಿನ ಪ್ರೋಮೋದಲ್ಲೂ ಇದೇ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ನೀರು ತುಂಬಿಸುವ ಟಾಸ್ಕ್‌ನಲ್ಲಿ ಸ್ಪಂದನಾ ಮತ್ತು ಕಾವ್ಯಾ ಇಬ್ಬರ ಬಕೆಟ್‌ಗಳಲ್ಲೂ ಸಮಾನ ಪ್ರಮಾಣದ ನೀರು ಇದ್ದರೂ, ಗಿಲ್ಲಿ ಕಾವ್ಯಾ ಬಕೆಟ್‌ನಲ್ಲೇ ಹೆಚ್ಚು ನೀರು ಇದೆ ಎಂದು ಹೇಳುತ್ತಾರೆ. ಅಶ್ವಿನಿ ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೂ, ಗಿಲ್ಲಿಯ ತೀರ್ಮಾನ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಇದರಿಂದ ಅವರದೇ ಅಭಿಮಾನಿಗಳಲ್ಲೂ ಅಸಮಾಧಾನ ಕಂಡುಬಂದಿದೆ.
ಫ್ಯಾಮಿಲಿ ವೀಕ್‌ನಲ್ಲಿ ಕಾವ್ಯಾ ಮನೆಯವರು ಗಿಲ್ಲಿಯ ಜತೆಗೇ ಇರಲು ಹೇಳಿದ್ದು, ಕಾವ್ಯಾಳ ತಂದೆ ಗಿಲ್ಲಿಗೆ ಬ್ರೇಸ್‌ಲೆಟ್ ಹಾಕಿದ ಘಟನೆಗಳ ಬಳಿಕ ಇಬ್ಬರ ನಡುವಿನ ಸಮೀಪತೆ ಇನ್ನಷ್ಟು ಹೆಚ್ಚಾಗಿದೆ. ಕಾವ್ಯಾ ಒಮ್ಮೆ ಗಿಲ್ಲಿಯನ್ನು ನಾಮಿನೇಟ್ ಮಾಡಿದರೂ, ಗಿಲ್ಲಿ ಅದನ್ನು ದೊಡ್ಡ ವಿಷಯವಾಗಿಸಿಕೊಂಡಿಲ್ಲ. ಆದರೆ ಈಗ ಗಿಲ್ಲಿಯ ಆಟ ಸಂಪೂರ್ಣವಾಗಿ ಕಾವ್ಯಾ ಸುತ್ತಲೇ ತಿರುಗುತ್ತಿದೆ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿದೆ.
ಹೀಗೆ ಮುಂದುವರಿದರೆ ಕಾವ್ಯಾಗೆ ಲಾಭ, ಗಿಲ್ಲಿಗೆ ನಷ್ಟ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಾವ್ಯಾಳನ್ನೇ ಕೈಹಿಡಿದು ಫೈನಲ್‌ಗೆ ಕರೆದೊಯ್ಯುವ ಪ್ರಯತ್ನವೇ ಇದು ಎಂದು ವ್ಯಂಗ್ಯವಾಡುವವರೂ ಇದ್ದಾರೆ. ಗಿಲ್ಲಿ ತನ್ನ ಆಟವನ್ನು ಬದಲಿಸದಿದ್ದರೆ ಟ್ರೋಫಿ ಕನಸು ಕಷ್ಟವಾಗಬಹುದು ಎಂಬ ಮಾತುಗಳು ಇದೀಗ ಮನೆ ಹೊರಗೂ ಕೇಳಿಬರುತ್ತಿವೆ.

