ಸಿನಿಮಾ ಸುದ್ದಿ

ತುಳು ಸಿನಿಮಾ ‘ಬನ’ ಮೂಲಕ ನಟನಾಗಿ ಮಿಂಚಿದ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ

Share It

ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಸುದ್ದಿ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ ಇದೀಗ ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರೆ.

ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನದ ತುಳು ಸಿನಿಮಾ ‘ಬನ’ ಮೂಲಕ ಅವರು ನಟನಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ನಾಗಬನದ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಜಯಪ್ರಕಾಶ್‌ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌, ರಿಪಬ್ಲಿಕ್‌ ಕನ್ನಡ ಸೇರಿದಂತೆ ಹಲವು ಖ್ಯಾತ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದ ಜಯಪ್ರಕಾಶ್‌ ಶೆಟ್ಟಿ ಇದೀಗ ಸುದ್ದಿ ಓದುವಿಕೆಗೂ ವಿರಾಮ ನೀಡಿ ತುಳು ಚಿತ್ರರಂಗಕ್ಕೆ ಪ್ರವೇಶಿಸಿರುವುದು ಅಧಿಕೃತವಾಗಿದೆ. ‘ಧರ್ಮದೈವ’, ‘ಧರ್ಮಚಾವಡಿ’ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ನಿತಿನ್‌ ರೈ ಕುಕ್ಕುವಳ್ಳಿಯವರ ಬಹುನಿರೀಕ್ಷಿತ ಸಿನಿಮಾದಲ್ಲಿ ಅವರ ಪಾತ್ರ ಕುತೂಹಲ ಮೂಡಿಸಿದೆ.

ಮೂಲಗಳ ಮಾಹಿತಿ ಪ್ರಕಾರ, ‘ಬನ’ ಚಿತ್ರದ ಹೆಚ್ಚಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಜಯಪ್ರಕಾಶ್‌ ಶೆಟ್ಟಿ ಸುಮಾರು ಆರು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ಹಾಗೂ ಪುತ್ತೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ನಾಗದೇವರ ವಾಸಸ್ಥಳವಾದ ನಾಗಬನದ ಕಥೆಯನ್ನು ಆಧರಿಸಿ ಚಿತ್ರ ಸಾಗಲಿದೆ. ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.

ಈ ಹಿಂದೆ ಜಯಪ್ರಕಾಶ್‌ ಶೆಟ್ಟಿ ಅವರಿಗೆ ಬಿಗ್‌ಬಾಸ್‌ ಕಾರ್ಯಕ್ರಮದಿಂದ ಆಹ್ವಾನವೂ ಬಂದಿತ್ತು. ಆದರೆ ಆ ಅವಕಾಶವನ್ನು ತಾನೇ ನಿರಾಕರಿಸಿದ್ದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದರು.

ಸುದ್ದಿ ಕ್ಷೇತ್ರದಲ್ಲಿ ‘ಬಿಗ್‌ ಬಿ’ ಎಂಬ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಮೂಲಕ ಜನಮನ ಗೆದ್ದಿದ್ದ ಜಯಪ್ರಕಾಶ್‌ ಶೆಟ್ಟಿ, ಈಟಿವಿ ಕನ್ನಡದಿಂದ ಆರಂಭಿಸಿ ಏಷ್ಯಾನೆಟ್‌ ಸುವರ್ಣ ಹಾಗೂ ರಿಪಬ್ಲಿಕ್‌ ಕನ್ನಡದವರೆಗೆ ತಮ್ಮದೇ ಗುರುತು ಮೂಡಿಸಿದ್ದರು. ಇದೀಗ ಅವರ ಈ ಹೊಸ ಸಿನಿಮಾ ಪ್ರಯೋಗ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.


Share It

You cannot copy content of this page