ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಎಂ.ಜಿ. ರಸ್ತೆಗೆ ಬಂದಿದ್ದ ದಂಪತಿಗಳಲ್ಲಿ, ಭಾರೀ ಜನಸಂದಣಿಯ ನಡುವೆ ಮಹಿಳೆ ಪತಿಯಿಂದ ದೂರವಾಗಿ ಕಾಣೆಯಾಗಿದ್ದಾರೆ. ಪತ್ನಿ ಕಣ್ಮರೆಯಾದ ಆಘಾತ ಹಾಗೂ ತೀವ್ರ ಮಾನಸಿಕ ಒತ್ತಡದಿಂದ ಪತಿಗೆ ಅಸ್ವಸ್ಥತೆ ಉಂಟಾಗಿ ಫಿಟ್ಸ್ ಕಾಣಿಸಿಕೊಂಡಿದೆ.
ಪತ್ನಿಯನ್ನು ಎಲ್ಲೆಡೆ ಹುಡುಕಿದರೂ ಸುಳಿವು ಸಿಗದೆ ಹೋದಾಗ ಪತಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಈ ದೃಶ್ಯ ಗಮನಿಸಿದ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ ಆಂಬ್ಯುಲೆನ್ಸ್ ಮೂಲಕ ಅವರನ್ನು ಶಿವಾಜಿನಗರದ ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪೊಲೀಸರು ಮಾಹಿತಿ ಪಡೆದಿದ್ದು, ನಾಪತ್ತೆಯಾಗಿರುವ ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಹಿಳೆಯ ಗುರುತು ಹಾಗೂ ಚಲನವಲನ ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

