ಕೋಲಾರದಲ್ಲಿ ಬೀದಿನಾಯಿ ಹಾವಳಿ: ಒಂದೇ ದಿನ 21 ಮಂದಿಗೆ ಗಾಯ
ಕೋಲಾರ: ನಗರದಲ್ಲಿ ಬೀದಿನಾಯಿಯ ಅಟ್ಟಹಾಸ ಬುಧವಾರ ಆತಂಕ ಸೃಷ್ಟಿಸಿತು. ಆರ್‌ಟಿಓ ಕಚೇರಿ ಎದುರು ಒಂದೂವರೆ ಗಂಟೆಯೊಳಗೆ ಆರ್‌ಟಿಓ ಬ್ರೇಕ್ ಇನ್‌ಸ್ಪೆಕ್ಟರ್ ಸೇರಿ 21 ಮಂದಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಕೊನೆಗೆ ಸಾರ್ವಜನಿಕರೇ ಆ ನಾಯಿಯನ್ನು ಹಿಡಿದು ಕೊಂದು ಹಾಕಿದರು.
ಬೆಳಗ್ಗೆ ಸುಮಾರು 11ರ ವೇಳೆಗೆ ಆರ್‌ಟಿಓ ಕಚೇರಿ ಸುತ್ತಮುತ್ತ ಸಂಚರಿಸುತ್ತಿದ್ದ ಜನರ ಮೇಲೆ ನಾಯಿ ಏಕಾಏಕಿ ದಾಳಿ ನಡೆಸಿತು. ಬಳಿಕ ಹಳೆ ಹೆಂಚಿನ ಕಾರ್ಖಾನೆ ಬಡಾವಣೆ ಹಾಗೂ ಬಿಜಿಎಸ್ ಪಿಯು ಕಾಲೇಜು ಪ್ರದೇಶಕ್ಕೂ ನುಗ್ಗಿ ಇನ್ನೂ ಕೆಲವರಿಗೆ ಗಾಯ ಮಾಡಿತು. ನಾಯಿ ಬಾಯಿಂದ ಜೊಲ್ಲು ಸುರಿಯುತ್ತಿದ್ದ ಕಾರಣ ಅದು ಹುಚ್ಚು ನಾಯಿ ಇರಬಹುದೆಂದು ಗಾಯಾಳುಗಳು ಶಂಕಿಸಿದ್ದಾರೆ.
ಗಾಯಗೊಂಡ ಎಲ್ಲರನ್ನು ತಕ್ಷಣವೇ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಆಂಟಿ ರೇಬಿಸ್ ಲಸಿಕೆ ಹಾಕಲಾಯಿತು. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾದರು. ಕೆಜಿಎಫ್‌ನಿಂದ ನಾಯಿ ಹಿಡಿಯುವ ಸಿಬ್ಬಂದಿಯನ್ನು ಕರೆಸಲು ಯತ್ನಿಸಲಾಯಿತಾದರೂ, ಅಷ್ಟರಲ್ಲಿ ರಾಷ್ಟ್ರೀಯ ಹೆದ್ದಾರಿ 75 ಕಡೆಗೆ ಓಡುತ್ತಿದ್ದ ನಾಯಿಯನ್ನು ಸಾರ್ವಜನಿಕರೇ ಹಿಡಿದು ಕೊಂದರು.
ನಗರಸಭೆ ಆಯುಕ್ತ ನವೀನ್ ಚಂದ್ರ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಆರ್‌ಟಿಓ ಕಚೇರಿ ಆವರಣದಲ್ಲಿ ಜನರು ಭಯದಿಂದ ಓಡಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.
ನಗರದ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಆಯುಕ್ತ ನವೀನ್ ಚಂದ್ರ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಬೀದಿನಾಯಿಗಳಿಗೆ ಆಂಟಿ ರೇಬಿಸ್ ಲಸಿಕೆ ನೀಡಲಾಗುವುದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಆಹಾರ ನೀಡಲು ನಿರ್ದಿಷ್ಟ ಕೇಂದ್ರಗಳನ್ನು ಸ್ಥಾಪಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುವುದೆಂದರು.
ಜಿಲ್ಲೆಯಲ್ಲಿ 79 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳು
ಸಮೀಕ್ಷೆ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಸುಮಾರು 79,281 ಬೀದಿನಾಯಿಗಳಿವೆ. ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿರುವ ವರದಿಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಿಮಲ್ ಬರ್ತ್ ಕಂಟ್ರೋಲ್ ಯೋಜನೆ ಜಾರಿಗೆ ತಂದು, ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ನಿಲ್ದಾಣಗಳ ಆವರಣದಲ್ಲಿರುವ ನಾಯಿಗಳನ್ನು ತಾತ್ಕಾಲಿಕ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಿದೆ. 100 ನಾಯಿಗಳ ಆಶ್ರಯ ಕೇಂದ್ರಕ್ಕೆ ತಿಂಗಳಿಗೆ ಅಂದಾಜು ₹3.33 ಲಕ್ಷ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


