ಹುಬ್ಬಳ್ಳಿ: ಸ್ವಂತ ತಂದೆಯಿAದಲೇ ಹತ್ಯೆಗೀಡಾದ ಗರ್ಭಿಣಿ ಮಾನ್ಯಾ ಪರಿಸ್ಥಿತಿ ಮತ್ಯಾರಿಗೂ ಬರದಂತೆ ಮಾಡುವ ಮಹತ್ವದ ಕಾಯ್ದೆಯೊಂದನ್ನು ತರಲು ಸರಕಾರ ತೀರ್ಮಾನಿಸಿದ್ದು, ಆ ಕಾಯ್ದೆಗೆ ಮಾನ್ಯಾ ಹೆಸರನ್ನೇ ಇಡಲು ಚಿಂತಿಸಿದೆ.
ಈ ಕುರಿತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮಾತನಾಡಿದ್ದು, ಹುಬ್ಬಳ್ಳಿಯಲ್ಲಿ ನಡೆದಿದ್ದು ಅಮಾನವೀಯ ಹೇಯ ಕೃತ್ಯ. ಇಂತಹ ಮರ್ಯಾದೆ ಗೇಡು ಹತ್ಯೆ ತಡೆಗೆ ಮಾನ್ಯ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಇದೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ, ಮನುವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರು, ಅದಕ್ಕೆ ಉತ್ತೇಜನ ಕೊಟ್ಟವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ‘ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಸೂಚನೆ ಕೊಡಲಾಗಿದೆ ಎಂದರು.
ಇAತಹ ಮರ್ಯಾದೆ ಗೇಡು ಹತ್ಯೆ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ನಮ್ಮದು ನಾಗರಿಕ ಮತ್ತು ಮುಂದುವರೆದ ರಾಜ್ಯ. ಪ್ರಾಯಕ್ಕೆ ಬಂದ ಯುವಕ, ಯುವತಿಯರು ತಮ್ಮ ಒಪ್ಪಿಗೆ ಮೇರೆಗೆ ಯಾವ ಧರ್ಮ, ಜಾತಿಯವರನ್ನು ಮದುವೆಯಾಗಲು ಮುಕ್ತ ಅವಕಾಶವಿದೆ. ಇದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಈ ರೀತಿ ಕೆಲಸ ಮಾಡಿದ್ರೆ ಅದಕ್ಕೆ ಬೆಂಬಲಿಸುವ ವ್ಯಕ್ತಿಗಳನ್ನು ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.
ಮಾರ್ಯಾದೆ ಗೇಡು ಹತ್ಯೆ ತಡೆಗೆ ಉಗ್ರವಾದ ಕಾನೂನು ತರಲು ಚಿಂತನೆ ನಡೆದಿದೆ. ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಸಿಎಂ ಜತೆ ಈ ಕುರಿತು ಚರ್ಚೆ ನಡೆಸುತ್ತೇನೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮಾನ್ಯಾ ಪಾಟೀಲ್ ಹೆಸರಿನಲ್ಲಿಯೇ ಮಸೂದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

