ಪುಣೆ: ಪುಣೆಯ ನಗರಪಾಲಿಕೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎದುರಾಳಿ ಅಭ್ಯರ್ಥಿಯ ಬಿ ಫಾರಂ ಅನ್ನೆ ಹಗಿದು ನುಂಗಿರುವ ಘಟನೆ ನಡೆದಿದೆ.
ವಾರ್ಡ್ ಕಚೇರಿಯ ನಾಮಪತ್ರ ಸಲ್ಲಿಕೆ ಸ್ಥಳ ಕ್ಕೆ ಆಗಮಿಸಿದ ಶಿವಸೇನಾ ಅಭ್ಯರ್ಥಿ, ಎದುರಾಳಿಯ ಎ ಫಾರಂ ಮತ್ತು ಬಿ ಫಾರಂ ಗಳನ್ನು ಏಕಾಏಕಿ ತೆಗೆದು ಬಾಯಲ್ಲಿ ಹಾಕಿಕೊಂಡು ಹಗಿದು ನುಂಗಿಬಿಟ್ಟಿದ್ದಾರೆ. ಅಧಿಕಾರಿಗಳು ನೋಡನೋಡುತ್ತಿದ್ದಂತೆ ಈ ಘಟನೆ ನಡೆದಿದ್ದು, ಉಪಚುನಾವಣಾ ಅಧಿಕಾರಿ, ಮನೀಶಾ ಬೂಟ್ಕರ್ ಅವರು, ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೊದಲಿಗೆ ಮಚಿಂದ್ರಾ ದಾವಳೆ ಎಂಬ ಅಭ್ಯರ್ಥಿಗೆ ಪಕ್ಷದಿಂದ ಬಿ ಫಾರಂ ನೀಡಲಾಗಿತ್ತು. ಅನಂತರ ಆರೋಪಿಗೆ ಎಬಿ ಫಾರಂ ನೀಡಿತ್ತು. ನಾಮಪತ್ರ ಸಲ್ಲಿಕೆ ಕಚೇರಿಗೆ ಆಗಮಿಸಿದ ಆರೋಪಿ, ಈವರೆಗೆ ಸಲ್ಲಿಸಿದ ನಾಮಪತ್ರಗಳ ಮಾಹಿತಿ ಕೇಳಿದ್ದಾರೆ. ಅದರಲ್ಲಿದ್ದ ದಾವಳೆ ಅವರ ಬಿ ಫಾರಂ ಅನ್ನು ಹರಿದು ಬಾಯಿಗೆ ಹಾಕಿಕೊಂಡಿದ್ದಾರೆ. ಸಿಬ್ಬಂದಿ ತಡೆಯುವ ಪ್ರಯತ್ನ ಮಾಡಿದರಾದರೂ, ಅದನ್ನು ನುಂಗಿಬಿಟ್ಟಿದ್ದಾರೆ ಎನ್ನಲಾಗಿದೆ.
ಬಿ ಫಾರಂ ತಮಗೆ ಕೊಡದಿರುವ ಸಿಟ್ಟಿಗೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ, ಬಿ ಫಾರಂ ಮರಳಿ ಕೊಡಿಸುವ ಮತ್ತು ಆರೋಪಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಒಟ್ಟಾರೆ ಹೊಟ್ಟೆಕಿಚ್ಚಿಗೆ ಕಾಗದವನ್ನೇ ನುಂಗಿದ ಭೂಪ ಇದೀಗ ಪೊಲೀಸ್ ತನಿಖೆ ಎದುರಿಸುತ್ತಿದ್ದಾನೆ.

