ಬೆಂಗಳೂರು: ಪೋಕ್ಸೊ ವಿಶೇಷ ನ್ಯಾಯಾಲಯ ಅಪ್ರಾಪ್ತೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ ಅಪರಾಧಿಗೆ ವಿಧಿಸಿದ್ದ 10 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಸವರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳು ಪರಿಶೀಲಿಸಿದರೆ ಸಂತ್ರಸ್ತೆ ಅಪ್ರಾಪ್ತೆ ಎಂಬ ಅಂಶ ಗೊತ್ತಾಗಲಿದೆ.
ಜತೆಗೆ, ಸಂತ್ರಸ್ತೆ ನೀಡಿರುವ ಹೇಳಿಕೆಗಳು ವಿಶ್ವಾಸಾರ್ಹ ಮತ್ತು ನಂಬಲಾರ್ಹವಾಗಿದೆ. ಪ್ರಕರಣ ಸಂಬAಧ ಮೇಲ್ಮನವಿದಾರ ಸಂತ್ರಸ್ತೆಗೆ ಅತ್ಯಾಚಾರವೆಸಗಿರುವ ಆರೋಪ ಸಂಬಂಧ ಸಾಕ್ಷ್ಯಾಧಾರಗಳು ಸಾಬೀತುಪಡಿಸಿವೆ. ಜತೆಗೆ, ಪ್ರಕರಣ ತನಿಖೆ ನಡೆಸಿರುವ ಪ್ರಾಸಿಕ್ಯೂಷನ್ ಅಪರಾಧಿಯ ವಿರುದ್ಧ ತನಿಖೆ ನಡೆಸಿ ಅನುಮಾನಗಳನ್ನು ಮೀರಿ ಆರೋಪವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ.
ಅಪರಾಧಿಗೆ ವಿಚಾರಣಾ ನ್ಯಾಯಾಲಯ ಪೋಕ್ಸೊ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಿರುವ ಕ್ರಮ ಸರಿಯಾಗಿದ್ದು, ಯಾವುದೇ ಕಾನೂನಿನ ದೋಷಗಳು ಉಂಟಾಗಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯ ಆದೇಶದಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಷ್ಟೇ ಅಲ್ಲದೆ, ಆರೋಪಿಯಿಂದ ಡಿಎನ್‌ಎ ಪರೀಕ್ಷೆಗೊಳಪಡಿಸಲು ರಕ್ತ ಮಾದರಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸೂಕ್ತ ಮಾರ್ಗಸೂಚಿಗಳ ಅನುಸರಿಸಿಲ್ಲ. ಅಲ್ಲದೆ, ಸಂತ್ರಸ್ತೆ ಹಾಗೂ ಅಪರಾಧಿಯ ಕುಟುಂಬಸ್ಥರ ನಡುವೆ ದ್ವೇಷವಿತ್ತು ಎಂಬ ಕಾರಣಕ್ಕೆ ಈ ಆರೋಪ ಮಾಡಲಾಗಿದೆ ಎಂಬುದಾಗಿ ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ಆದೇಶ ಎತ್ತಿಹಿಡಿದು ಆದೇಶಿಸಿದೆ.

