ಆನೇಕಲ್: ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ಆಯತಪ್ಪಿ ಬಿದ್ದಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ಕೆರೆ ಮತ್ತು ನೀಲಗಿರಿ ತೋಪಿನಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಇದನ್ನು ತಿಳಿದ ಜನರು ಗುಂಪುಗುAಪಾಗಿ ಆನೆಗಳನ್ನು ವೀಕ್ಷಣೆ ಮಾಡಲು ಬಂದಿದ್ದಾರೆ. ಈ ವೇಳೆ ರೊಚ್ಚೆಗೆದ್ದ ಆನೆಗಳು ಜನರ ಮೇಲೆ ದಆಳಿಗೆ ಮುಂದಾಗಿವೆ ಎನ್ನಲಾಗಿದೆ.
ಈ ವೇಳೆ ವೆಂಕಟೇಶ್ ಎಂಬಾತನ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ವೆಂಕಟೇಶ್ ಓಡುವ ಭರದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಅವರ ತಲೆಗೆ ಪೆಟ್ಟುಬಿದ್ದಿದ್ದು, ಗಾಯಾಳುವಿಗೆ ಆನೇಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆನೆಗಳನ್ನು ಕಾಡಿಗಟ್ಟುವ ಕ್ರಮ ತೆಗೆದುಕೊಂಡಿದ್ದಾರೆ.
ಆನೇಕಲ್ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆದಿರುವ ಬೀನ್ಸ್ ಮತ್ತು ರಾಗಿ ಬೆಳೆಗಳನ್ನು ಈ ಕಾಡಾನೆಗಳು ನಾಶಪಡಿಸಿವೆ. ಇವುಗಳನ್ನು ಬೇಗನೆ ಸೆರೆಹಿಡಿದ ಜನರ ಜೀವ ಹಾಗೂ ಬೆಳೆಗಳನ್ನು ಉಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

