ಗದಗ: ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ರೈತನೊಬ್ಬ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ರೈತರ ಮೆಕ್ಕೆಜೋಳ ಸಂಗ್ರಹಕ್ಕೆ ಬೆಂಕಿ ಹಾಕಲಾಗಿದೆ. ಪೆಟ್ರೋಲ್, ಡಿಸೇಲ್ ಸುರಿದು ಬೆಂಕಿ ಹೊತ್ತಿಸಲಾಗಿದೆ ಎಂದು ಹೇಳಲಾಗಿದೆ. ನಾಲ್ವರು ದುಷ್ಕರ್ಮಿಗಳು ಬೆಂಕಿ ಹಚ್ಚಲು ಬಂದಿದ್ದರು ಎಂದು ಅನುಮಾನಿಸಲಾಗಿದೆ.
ಬೆಂಕಿಯಿAದಾಗಿ ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 60 ಲಕ್ಷ ರುಪಾಯಿ ಬೆಲೆಬಾಳುವ ಮೆಕ್ಕೆಜೋಳ ಸುಟ್ಟುಕರಕಲಾಗಿದೆ. ಜೋಳ ಸುಟ್ಟುಹೋಗುವುದನ್ನು ಕಂಡು ರೈತನ ಕುಟುಂಬ ಮಕ್ಕಳ ಸಮೇತ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ತಡೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಪತ್ತೆಗೆ ಬಲೆಬೀಸಿದ್ದಾರೆ. ಈ ನಡುವೆ ಸರಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

