ಸಿನಿಮಾ ಸುದ್ದಿ

ತಿಥಿ’ ಚಿತ್ರದ ಮತ್ತೊಂದು ಕಂಬ ಕುಸಿತ: ನೂರು ವರ್ಷ ಪೂರೈಸಿದ್ದ ಸೆಂಚುರಿಗೌಡ ವಿಧಿವಶ

Share It

ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಛಾಪು ಮೂಡಿಸಿದ್ದ ‘ತಿಥಿ’ ಚಿತ್ರದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದ ಸೆಂಚುರಿಗೌಡ ಅಲಿಯಾಸ್ ಸಿಂಗ್ರಿಗೌಡ ಅವರು ನಿಧನರಾಗಿದ್ದಾರೆ. ನಟ ಗಡ್ಡಪ್ಪ ಅವರ ಅಗಲಿಕೆಯೊಂದೂವರೆ ತಿಂಗಳೊಳಗೆ ಇದೇ ಚಿತ್ರದ ಮತ್ತೊಬ್ಬ ಜನಪ್ರಿಯ ಮುಖವೂ ನಮ್ಮನ್ನೆಲ್ಲಾ ಬಿಟ್ಟುಹೋಗಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಚುರಿಗೌಡ ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರು ಜನವರಿ 4ರ ರಾತ್ರಿ ಕೊನೆಯುಸಿರು ಎಳೆದಿದ್ದಾರೆ.

2015ರಲ್ಲಿ ಬಿಡುಗಡೆಯಾದ ‘ತಿಥಿ’ ಚಿತ್ರಕ್ಕೆ ಜೀವ ತುಂಬಿದ ಪಾತ್ರಗಳಾಗಿ ಚನ್ನೇಗೌಡ (ಗಡ್ಡಪ್ಪ) ಮತ್ತು ಸೆಂಚುರಿಗೌಡ ಹೆಸರು ಪಡೆದಿದ್ದರು. ಗಡ್ಡಪ್ಪ ಅವರು ಕಳೆದ ನವೆಂಬರ್ 12ರಂದು ವಿಧಿವಶರಾಗಿದ್ದರು. ಆ ನೋವು ಮಗ್ಗುವ ಮೊದಲೇ ಸೆಂಚುರಿಗೌಡ ಅವರ ಅಗಲಿಕೆ ಸಂಭವಿಸಿದ್ದು, ‘ತಿಥಿ’ ಪ್ರೇಕ್ಷಕರಿಗೆ ದುಃಖದ ಸಂಗತಿಯಾಗಿ ಪರಿಣಮಿಸಿದೆ.

ಜನಸಾಮಾನ್ಯರ ನಡುವೆ ಸೆಂಚುರಿಗೌಡ ಎಂದೇ ಖ್ಯಾತರಾಗಿದ್ದ ಸಿಂಗ್ರಿಗೌಡ ಅವರು ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರಿಗೌಡನ ಕೊಪ್ಪಲಿನವರು ಅವರು. ‘ತಿಥಿ’ ಚಿತ್ರದ ಯಶಸ್ಸಿನ ಬಳಿಕ ಸಿಂಗ್ರಿಗೌಡ ಎಂಬ ಹೆಸರು ಮರೆತು, ಎಲ್ಲರಿಗೂ ಅವರು ಸೆಂಚುರಿಗೌಡರಾಗಿಯೇ ಪರಿಚಿತರಾದರು.

‘ತಿಥಿ’ ಬಿಡುಗಡೆಯ ನಂತರ ಅವರಿಗೆ ಹಲವು ಸಿನಿಮಾಗಳಿಂದ ಅವಕಾಶಗಳು ಬಂದಿದ್ದರೂ, ಕೆಲವೇ ಚಿತ್ರಗಳಲ್ಲಿ ಮಾತ್ರ ಅವರು ಅಭಿನಯಿಸಿದರು. ಪಾಂಡವಪುರ, ಮೇಲುಕೋಟೆ ಕಡೆಗೆ ಪ್ರಯಾಣಿಸುವವರು ಹಾಗೂ ಊರಿಗೆ ಬರುವ ಅತಿಥಿಗಳು ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆ ಚಿತ್ರದ ಬಳಿಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.

ಗಡ್ಡಪ್ಪ ಅವರು ವಯೋಸಹಜ ಕಾಯಿಲೆ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅಗತ್ಯವಾದ ಸೌಲಭ್ಯಗಳ ಕೊರತೆಯ ನಡುವೆ ಅವರು ಕಳೆದ ವರ್ಷ ನಿಧನರಾಗಿದ್ದರು. ಇದೀಗ ಅವರ ಆತ್ಮೀಯ ಗೆಳೆಯನಂತಿದ್ದ ಸೆಂಚುರಿಗೌಡ ಕೂಡ ವಿಧಿವಶರಾಗಿರುವುದು ಮಂಡ್ಯ ಜಿಲ್ಲೆಗೂ, ಚಿತ್ರರಂಗಕ್ಕೂ ದೊಡ್ಡ ನಷ್ಟವಾಗಿದೆ.

ಸೆಂಚುರಿಗೌಡ ಚಿತ್ರರಂಗಕ್ಕೆ ಬಂದ ಕಥೆ
ಸೆಂಚುರಿಗೌಡ ಅಲಿಯಾಸ್ ಸಿಂಗ್ರಿಗೌಡ ಅವರ ಚಿತ್ರರಂಗ ಪ್ರವೇಶವೂ ಅಚ್ಚರಿಯದ್ದೇ. ಅವರ ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ‘ತಿಥಿ’ ಚಿತ್ರದ ನಿರ್ದೇಶಕರ ಗಮನಕ್ಕೆ ಸಿಂಗ್ರಿಗೌಡ ಬಂದರು. ಅಂತಿಮ ದರ್ಶನದ ವೇಳೆ ಅವರ ವ್ಯಕ್ತಿತ್ವ ನಿರ್ದೇಶಕರನ್ನು ಆಕರ್ಷಿಸಿತು. ಅದೇ ಕ್ಷಣದಲ್ಲಿ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿತು.

ಆ ಅವಕಾಶವನ್ನು ಒಪ್ಪಿಕೊಂಡ ಸಿಂಗ್ರಿಗೌಡ ಅವರು ‘ತಿಥಿ’ಯಲ್ಲಿ ಸೆಂಚುರಿಗೌಡ ಪಾತ್ರಕ್ಕೆ ಜೀವ ತುಂಬಿದರು. ಈ ಚಿತ್ರಕ್ಕಾಗಿ ಅವರಿಗೆ ನಿರ್ಮಾಪಕರು 20 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ನಂತರವೂ ಅವರು ಕೆಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ಕೆಲವು ಸಿನಿಮಾಗಳಲ್ಲಿ ಸಂಭಾವನೆ ದೊರಕಿಲ್ಲ ಎಂಬ ನೋವನ್ನು ಅವರು ಹಲವು ಬಾರಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಆದರೂ, ‘ತಿಥಿ’ಯ ಮೂಲಕ ಪಡೆದ ಜನಮನ್ನಣೆ ಅವರ ಜೀವನದ ದೊಡ್ಡ ಸಾಧನೆಯಾಗಿ ಉಳಿಯಿತು.


Share It

You cannot copy content of this page