ಬೆಂಗಳೂರು: ಮದುವೆ ಮಾಡಲಿಲ್ಲ ಎಂದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆಯ ಗಂಟೆ ಕಳೆಯುವುದರೊಳಗೆ ತಂದೆಯೇ ಮಗನನ್ನು ಕೊಂದಿರುವ ಮತ್ತೊಂದು ಕರಾಳ ಘಟನೆ ನಡೆದಿದೆ.
ಕಿರಣ್ ಆಲೂರಿ ಎಂಬಾತ ಕೊಲೆಯಾದ ಯುವಕ. ಆತನನ್ನು ಕೊಲೆ ಮಾಡಿದಾತ ಆತನ ತಂದೆ ನಿಜಗುಣ ಆಲೂರೆ. ಈತ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹೋಟೆಲ್ ಮಾಲೀಕ ಉಸ್ಮಾನ್ ಜತೆ ಸೇರಿ ಮಗನ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಗಮನನ್ನು ಕೊಲೆ ಮಾಡಿ ಉಸ್ಮಾನ್ ಕಾರಿನಲ್ಲಿಟ್ಟುಕೊಂಡು ಹೃದಯಾಘಾತವಾಗಿದೆ ಎಂದು ಎರಡು ಮೂರು ಆಸ್ಪತ್ರೆಗೆ ತೆರಳಿದ್ದ. ಅನಂತರ ಕಿರಣ್ ಸ್ನೇಹಿತರಿಗೆ ಕರೆ ಮಾಡಿ, ಹೃದಯಾಘಾತವಾಗಿದೆ ಎಂದು ಸುಳ್ಳು ಕತೆ ಕಟ್ಟಿದ್ದ ಎನ್ನಲಾಗಿದೆ.
ಅನಂತರ ಶವಸಂಸ್ಕಾರಕ್ಕೆ ಸ್ನೇಹಿತರೆಲ್ಲ ಸೇರಿಕೊಂಡಾಗ ಶವವನ್ನು ಸುಟ್ಟುಹಾಕಲು ತಂದೆ ನಿಜಗುಣ ಆಲೂರೆ ಮುಂದಾಗಿದ್ದ. ಹೂಳುವುದನ್ನು ಬಿಟ್ಟು ಸುಡಲು ಮುಂದಾದಾಗ ಕಿರಣ್ ಸ್ನೇಹಿತರಿಗೆ ಅನುಮಾನ ಮೂಡಿತ್ತು. ಹೀಗಾಗಿ, ಪೊಲೀಸರಿಗೆ ತಿಳಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವಸಂಸ್ಕಾರವನ್ನು ತಡೆದು ನಿಜಗುಣ ಆಲೂರೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಬಾಯ್ಬಿಟ್ಟಿದ್ದು, ಆತನ ಜತೆಗೆ ಸಹಕಾರ ನೀಡಿದ ಹೋಟೆಲ್ ಮಾಲೀಕ ಉಸ್ಮಾನ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

