ಅಪರಾಧ ಸುದ್ದಿ

ತಡರಾತ್ರಿಯ ಒಂದು ಆರ್ಡರ್‌, ಜೀವ ಉಳಿಸಿದ ಮಾನವೀಯತೆ: ಮಹಿಳೆಯ ಬದುಕಿಗೆ ಆಶಾಕಿರಣವಾದ ಡೆಲಿವರಿ ಸಿಬ್ಬಂದಿ

Share It

ತಡರಾತ್ರಿ ಇಲಿ ವಿಷವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಮಹಿಳೆಯೊಬ್ಬರ ಪ್ರಕರಣವು ಮಾನವೀಯತೆ ಹೇಗೆ ಒಂದು ಜೀವವನ್ನು ಉಳಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಪಾರ್ಸೆಲ್‌ ತಲುಪಿಸಲು ಹೊರಟ ಡೆಲಿವರಿ ಸಿಬ್ಬಂದಿಗೆ ಆ ಆರ್ಡರ್‌ ಹಿಂದೆ ಇರುವ ಅಪಾಯದ ಸುಳಿವು ಸಿಕ್ಕಿದ್ದು, ಆತನ ಸಮಯೋಚಿತ ನಡೆ ಮಹಿಳೆಯ ನಿರ್ಧಾರವನ್ನೇ ಬದಲಿಸಿತು.

ಇಂದು ಆನ್‌ಲೈನ್ ಡೆಲಿವರಿ ಸೇವೆಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿನದ ಯಾವ ಹೊತ್ತಿನಲ್ಲಾದರೂ ಕೆಲವೇ ನಿಮಿಷಗಳಲ್ಲಿ ವಸ್ತುಗಳು ಮನೆ ಬಾಗಿಲಿಗೆ ತಲುಪುತ್ತವೆ. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ತಡರಾತ್ರಿ ಮೂರು ಪ್ಯಾಕೆಟ್ ಇಲಿ ವಿಷವನ್ನು ಆರ್ಡರ್ ಮಾಡಿದ್ದರು. ಈ ಆರ್ಡರ್‌ನ್ನು ಡೆಲಿವರಿ ಮಾಡುವ ಜವಾಬ್ದಾರಿ ಪಡೆದ ಸಿಬ್ಬಂದಿ, ವಿಳಾಸ ಸ್ಪಷ್ಟವಾಗದ ಕಾರಣ ಮಹಿಳೆಗೆ ಕರೆ ಮಾಡಿದರು. ಕರೆ ವೇಳೆ ಆಕೆಯ ಧ್ವನಿಯಲ್ಲಿ ಅಸಹಜತೆ, ನೋವು ಮತ್ತು ಕಣ್ಣೀರು ಇದ್ದದ್ದು ಅವರಿಗೆ ಅನುಮಾನ ಹುಟ್ಟಿಸಿತು.

ಮಹಿಳೆಯ ಮಾತುಗಳಿಂದ ಏನೋ ತಪ್ಪು ನಡೆಯುವ ಸಾಧ್ಯತೆ ಇದೆ ಎಂದು ಅರಿತ ಡೆಲಿವರಿ ಸಿಬ್ಬಂದಿ, ಪಾರ್ಸೆಲ್ ಹಿಡಿದು ನೇರವಾಗಿ ಆಕೆಯ ಮನೆಗೆ ತೆರಳಿದರು. ಬಾಗಿಲು ತಟ್ಟಿದಾಗ ಮಹಿಳೆ ಬಾಗಿಲು ತೆರೆದಳು. ಆಕೆಯ ಸ್ಥಿತಿಯನ್ನು ನೋಡಿದ ಕ್ಷಣದಲ್ಲೇ ಸಿಬ್ಬಂದಿಗೆ ಅಪಾಯದ ಗಂಭೀರತೆ ಸ್ಪಷ್ಟವಾಯಿತು. ಆಕೆ ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದಳು, ಮಾತುಗಳು ತೊದಲುತ್ತಿದ್ದವು, ಕಣ್ಣೀರು ನಿಲ್ಲುತ್ತಿರಲಿಲ್ಲ.

ಅಂತಹ ಸಂದರ್ಭದಲ್ಲೂ ಆತ ಧೈರ್ಯ ತೋರಿದರು. ಮಹಿಳೆಗೆ ನೇರವಾಗಿ ಪಾರ್ಸೆಲ್ ನೀಡದೆ, ನಿಮ್ಮ ಆರ್ಡರ್‌ ದಾರಿಯಲ್ಲಿ ತಪ್ಪಾಗಿ ಬಿದ್ದು ಹೋಗಿದೆ, ಅದನ್ನು ಹುಡುಕಲು ಬಂದಿದ್ದೇನೆ ಎಂದು ಶಾಂತವಾಗಿ ಹೇಳಿದರು. ಬಳಿಕ ಮೃದುವಾಗಿ ಮಾತನಾಡುತ್ತಾ, ಈ ಹೊತ್ತಿನಲ್ಲಿ ಇಲಿ ವಿಷ ಆರ್ಡರ್ ಮಾಡುವ ಉದ್ದೇಶ ನನಗೆ ಅರ್ಥವಾಗುತ್ತಿದೆ, ಆದರೆ ದಯವಿಟ್ಟು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಮೊದಲಿಗೆ ಮಹಿಳೆ ಇಲಿ ಕಾಟ ಹೆಚ್ಚಾಗಿದೆ ಎಂದು ಕಾರಣ ಹೇಳಿದರೂ, ಆಕೆಯ ನೋವು ಸುಳ್ಳಲ್ಲ ಎಂಬುದು ಸ್ಪಷ್ಟವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಡೆಲಿವರಿ ಸಿಬ್ಬಂದಿ, ಈ ನೋವು ಶಾಶ್ವತವಲ್ಲ, ಸಮಯ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ನಿಮ್ಮ ಜೀವ ಬಹುಮೌಲ್ಯವಾದದ್ದು. ನಿಮ್ಮನ್ನು ನಂಬಿ ಬದುಕುತ್ತಿರುವ ಕುಟುಂಬಸ್ಥರು, ಪೋಷಕರು, ಆಪ್ತರ ನೋವನ್ನು ಒಮ್ಮೆ ಯೋಚಿಸಿ ಎಂದು ಸಮಾಧಾನಪಡಿಸಿದರು.

ಬಹಳ ಸಮಯ ಮಹಿಳೆಯ ಜೊತೆ ಮಾತನಾಡಿ, ಆಕೆಯ ಮನಸ್ಸನ್ನು ನಿಧಾನವಾಗಿ ಬದಲಿಸಲು ಪ್ರಯತ್ನಿಸಿದರು. ಕಣ್ಣೀರಿಡುತ್ತಲೇ ಮಹಿಳೆ ತನ್ನ ಮನದಾಳದ ನೋವನ್ನು ಹೊರಹಾಕಿದಳು. ಕೊನೆಗೆ ಆಕೆಯ ನಿರ್ಧಾರದಲ್ಲಿ ಬದಲಾವಣೆ ಕಂಡುಬಂದಿತು. ಬಳಿಕ ಡೆಲಿವರಿ ಸಿಬ್ಬಂದಿ, ನಿಮ್ಮ ಆರ್ಡರ್‌ ನನ್ನಲ್ಲೇ ಇದೆ, ಆದರೆ ದಯವಿಟ್ಟು ಇದನ್ನು ರದ್ದುಪಡಿಸಿ ಎಂದು ವಿನಂತಿಸಿದರು. ಅವರ ಮಾತಿಗೆ ಒಪ್ಪಿದ ಮಹಿಳೆ ಆರ್ಡರ್ ಕ್ಯಾನ್ಸಲ್ ಮಾಡಿದರು.

ಮನೆಯಿಂದ ಹೊರಬಂದ ಬಳಿಕ ಡೆಲಿವರಿ ಸಿಬ್ಬಂದಿ ನಡೆದ ಘಟನೆ ಬಗ್ಗೆ ವಿಡಿಯೋ ಮೂಲಕ ಹಂಚಿಕೊಂಡರು. ಈಗ ಈ ಮಾನವೀಯ ನಡೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದು ಜಾಗರೂಕ ಮನಸ್ಸು ಮತ್ತು ಕಾಳಜಿ ತುಂಬಿದ ಮಾತುಗಳು ಹೇಗೆ ಒಂದು ಜೀವವನ್ನು ಉಳಿಸಬಲ್ಲವು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.


Share It

You cannot copy content of this page