ನಂಜನಗೂಡು: ನಂಜನಗೂಡು ತಾಲ್ಲೂಕಿನಲ್ಲಿ ಸರಣಿ ಅಪರಾಧ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತಾಲ್ಲೂಕು ಆಡಳಿತ ಭವನದಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್ ಹಾಗೂ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಇತ್ತೀಚೆಗೆ ನಡೆದ ಸರಣಿ ದರೋಡೆ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ. ನಂಜನಗೂಡು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸಾರ್ವಜನಿಕ ಸುರಕ್ಷತೆ, ಸಾಮಾಜಿಕ ಶಾಂತಿ ಹಾಗೂ ಸಮಾಜದ ಭದ್ರತೆಗೆ ಧಕ್ಕೆ ತರುವ ಯಾವುದೇ ಅಪರಾಧಗಳನ್ನು ತಡೆಗಟ್ಟಬೇಕು ಎಂದರು.
ಅಪರಾಧಗಳಲ್ಲಿ ಭಾಗಿಯಾಗುವವರನ್ನು ತಕ್ಷಣ ಬಂಧಿಸಿ ಕಾನೂನುಬದ್ಧ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಕ್ಷೇತ್ರದಲ್ಲಿ ಚೆಕ್ ಪೋಸ್ಟ್ ರಚಿಸಿ, ತಾಲ್ಲೂಕಿನ ಒಳಗೆ ಬರುವ ಹೊರಗೆ ಹೋಗುವ ವಾಹನಗಳನ್ನು ಪರಿಶೀಲನೆ ಮಾಡಬೇಕು, ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸರ ನಿರ್ಲಕ್ಷ್ಯ ಜನರಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ ಎಂದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯ ನಂಜನಗೂಡಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಆತಂಕ ಹುಟ್ಟಿಸಿದೆ. ಶಾಂತಿ ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು. ಜನರಿಗೆ ಉತ್ತರಿಸಬೇಕಾದರೆ ನಮ್ಮಲ್ಲಿ ಮಾಹಿತಿ ಇರಬೇಕು. ಅಪರಾಧಗಳಿಗೆ ಬ್ರೇಕ್ ಬೀಳಬೇಕು ಎಂದು ಶಾಸಕರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಯಾಗಿ ಕಳೆದ ವಾರವಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲೆಯಲ್ಲಿರುವ ಎಲ್ಲಾ ಠಾಣೆಗಳಿಗೂ ಬೇಟಿ ನೀಡುತ್ತಿದ್ದೇನೆ. ನಂಜನಗೂಡಿನಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಕೊಲೆ, ಸರಣಿ ಕಳ್ಳತನ ಮತ್ತು ಕಾನೂನು ವಿರೋಧಿ ಚಟುವಟಿಕೆಗಳು ನಡೆಯುತ್ತದ್ದು ಪೋಲಿಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಂಜನಗೂಡಿನ ಪೋಲಿಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ.
ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಅದನ್ನ ನಿವಾರಣೆ ಮಾಡಲು ನಾನು ಬದ್ಧನಾಗಿರುತ್ತೇನೆ. ಮುಂಬರುವ ದಿನಗಳಲ್ಲಿ ನಂಜನಗೂಡು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಿಗೆ ಅವಕಾಶ ನೀಡುವುದಿಲ್ಲ. ಲೋಪದೋಷಗಳು ಯಾವುದು ಎಂಬುದನ್ನ ಕುಲಂಕಶವಾಗಿ ಪರಿಶೀಲಿಸುತ್ತೇನೆ. ರಾತ್ರಿ ಹಗಲು ನಿಮ್ಮಗಳ ಸೇವೆಗೆ ನಮ್ಮ ಇಲಾಖೆ ಬದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು , ಎಎಸ್ ಪಿ ಮಲ್ಲಿಕ್, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಚಂದ್ರಶೇಖರ್, ಸೇರಿ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

