ಶ್ರವಣಬೆಳಗೊಳ: ಸಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಸೈಬರ್ ವಂಚನೆ ಇದೀಗ ಹಳ್ಳಿಗಳಿಗೂ ಕಾಲಿಟ್ಟಿದ್ದು, ಸರಕಾರಿ ಯೋಜನೆಗಳ ನೆಪದಲ್ಲಿ ಮುಗ್ಧರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ.
ಇಂತಹದ್ದೇ ಒಂದು ಪ್ರಕರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸ ಪಲ್ಲವಿ ಎಂಬುವವರಿಗೆ ಸರಕಾರಿ ಯೋಜನೆಯೊಂದರ ನೆಪದಲ್ಲಿ 12ಸಾವಿರ ರು.ವಂಚನೆ ಮಾಡಲಾಗಿದೆ.
ಶನಿವಾರ ಪಲ್ಲವಿ ಅವರಿಗೆ ಅಪರಿಚಿತ ಸಂಖ್ಯೆಯೊಂದರಿಂದ ಕರೆ ಬಂದಿದ್ದು, ನಾವು ಸರಕಾರದ ಇಲಾಖೆಯೊಂದರಿಂದ ಮಾತನಾಡುತ್ತಿದ್ದೇವೆ ಎಂದು ಆರೋಪಿಗಳು ಪರಿಚಯಿಸಿಕೊಂಡಿದ್ದಾರೆ. ಅಂಗನವಾಡಿಯಿಂದ ಬರುವ ಸೌಲಭ್ಯ ಗಳಿಂದ ಇಂದು ನಿಮ್ಮ ಖಾತೆಗೆ ಸರ್ಕಾರ 12,000 ರು. ಜಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಅನಂತರ ಈ ಹಣವನ್ನು ಪಡೆಯಲು ತಾವು ನಾವು ಕಳಿಸುವ ಸಂದೇಶದ ಮೇಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಹೇಳಿದ್ದಾರೆ. ಸರಕಾರಿ ಯೋಜನೆಯ ಹಣ ಬರುತ್ತದೆ ಎಂಬ ಆಸೆಗೆ ಬಿದ್ದ ಪಲ್ಲವಿ ಅವರು, ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅವರ ಖಾತೆಯಿಂದ 12 ಸಾವಿರ ರುಪಾಯಿ ಕಟ್ ಆಗಿದೆ.
ತಮ್ಮ ಖಾತೆಗೆ ಹಣ ಬರುತ್ತದೆ ಎಂಬ ಆಸೆಯಿಂದ ಲಿಂಕ್ ಕ್ಲಿಕ್ ಮಾಡಿ, ಹಣ ಕಳೆದುಕೊಂಡ ಪಲ್ಲವಿ, ಇದೀಗ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇಂತಹ ಅಪರಿಚಿತ ಕರೆಗಳಿಂದ ಮೋಸ ಹೋಗಿ ಹಣ ಕಳೆದುಕೊಳ್ಳಬೇಡಿ, ನಿಮ್ಮ ಮುಗ್ಧತೆಯನ್ನೇ ಕಳ್ಳರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

