ಕ್ರೀಡೆ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಮತ್ತೆ ಕೊಹ್ಲಿ ಮ್ಯಾಜಿಕ್: ಏಕದಿನ ಕ್ರಿಕೆಟ್‌ನಲ್ಲಿ 28 ಸಾವಿರ ರನ್ ಮೈಲಿಗಲ್ಲು, ಸಚಿನ್ ದಾಖಲೆ ಹಿಂದಿಕ್ಕಿದ ವಿರಾಟ್

Share It

ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ವಿರಾಟ್ ಕೊಹ್ಲಿ ಅದ್ಭುತ ಲಯದಲ್ಲಿ ಮುಂದುವರಿದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಸಿಡಿಸಿದ ಅವರು, ನಂತರ ವಿಜಯ್ ಹಜಾರೆ ಟ್ರೋಫಿಯಲ್ಲೂ ಭರ್ಜರಿ ಶತಕದ ಮೂಲಕ ತಮ್ಮ ಫಾರ್ಮ್‌ನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, 50 ಓವರ್‌ಗಳ ಮಾದರಿಯಲ್ಲಿ ಅವರು ನಿರಂತರವಾಗಿ ರನ್ ಮಳೆ ಸುರಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ಕೊಹ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ, ತಮ್ಮ ಮಗಳು ವಾಮಿಕಾ ಜನ್ಮದಿನದಂದು ಕ್ರೀಡಾಂಗಣಕ್ಕಿಳಿದ ಕೊಹ್ಲಿ 25 ರನ್ ಪೂರೈಸುತ್ತಿದ್ದಂತೆ ಹೊಸ ವಿಶ್ವದಾಖಲೆ ನಿರ್ಮಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 28,000 ರನ್‌ಗಳನ್ನು ಪೂರೈಸಿದ ಬ್ಯಾಟರ್ ಎಂಬ ಗೌರವಕ್ಕೆ ಅವರು ಪಾತ್ರರಾದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಹೊಸ ಇತಿಹಾಸ ಬರೆದರು.

ಇಲ್ಲಿಯವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಮಟ್ಟದ ಸಾಧನೆ ಮಾಡಿದವರು ಕೇವಲ ಇಬ್ಬರು ಮಾತ್ರ — ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ. ಇದೀಗ ಆ ದಿಗ್ಗಜರ ಸಾಲಿಗೆ ವಿರಾಟ್ ಕೊಹ್ಲಿ ಸೇರಿದ್ದಾರೆ.

ಕೊಹ್ಲಿ ಈ ಸಾಧನೆಯನ್ನು ಕೇವಲ 624 ಇನ್ನಿಂಗ್ಸ್‌ಗಳಲ್ಲಿ 28,000 ರನ್ ಗಳಿಸುವ ಮೂಲಕ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು 84 ಶತಕಗಳು ಮತ್ತು 145 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ 644 ಇನ್ನಿಂಗ್ಸ್‌ಗಳಲ್ಲಿ, ಕುಮಾರ್ ಸಂಗಕ್ಕಾರ 666 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.

ಅದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಗೂ ಸಹಿ ಹಾಕಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಸ್ಥಾನವನ್ನು ಅವರು ಪಡೆದುಕೊಂಡರು. ಇದುವರೆಗೆ ಕುಮಾರ್ ಸಂಗಕ್ಕಾರ 668 ಇನ್ನಿಂಗ್ಸ್‌ಗಳಲ್ಲಿ 28,016 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಇದೀಗ ಕೊಹ್ಲಿ 624 ಇನ್ನಿಂಗ್ಸ್‌ಗಳಲ್ಲಿ 28,017 ರನ್ ಗಳಿಸಿ ಅವರನ್ನು ಹಿಂದಿಕ್ಕಿದ್ದಾರೆ.

ಪ್ರಸ್ತುತ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 123 ಪಂದ್ಯಗಳಲ್ಲಿ 9,230 ರನ್ ಗಳಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ 125 ಪಂದ್ಯಗಳಿಂದ 4,188 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ 309 ಪಂದ್ಯಗಳಿಂದ 14,600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 53 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ, ಈ ಮಾದರಿಯಲ್ಲಿ ಅತಿಹೆಚ್ಚು ಶತಕ ಗಳಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಗೂ ಮಾಲೀಕರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಟಿ ಮುನ್ನಡೆಯುತ್ತಿರುವ ಅವರು, ಮತ್ತೊಂದು ಶತಕದತ್ತ ದೃಢ ಹೆಜ್ಜೆ ಇಟ್ಟಿದ್ದಾರೆ.


Share It

You cannot copy content of this page