ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್‌ಸಿಬಿ) ಸತತ ಮೂರನೇ ಗೆಲುವು ಸಾಧಿಸಿ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ.
ಶುಕ್ರವಾರ ನಡೆದ ಲೀಗ್ನ 9ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ನವಿ ಮುಂಬೈನ DY ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ, ಗುಜರಾತ್ ಜೈಂಟ್ಸ್ ನಾಯಕಿ ಆಶ್ಲೇ ಗಾರ್ಡ್ನರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ RCB ಪವರ್ಪ್ಲೇನಲ್ಲೇ ಆರಂಭಿಕ 4 ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ರಾಧ ಯಾದವ್ ಮತ್ತು ರಿಚಾ ಘೋಷ್ 105 ರನ್‌ಗಳ ಜೊತೆಯಾಟವಾಡುವ ಮೂಲಕ ಸ್ಕೋರ್ ಗತಿಯನ್ನೆ ಬದಲಾಯಿಸಿದರು.
ಡೆತ್ ಓವರ್ ಗಳಲ್ಲಿ ನಾಡಿನೆ ಡಿ ಕ್ಲೆರ್ಕ್ ಸಹ ಅಬ್ಬರಿಸಿದರು. ಇವರ ಬ್ಯಾಟಿಂಗ್ ಬಲದಿಂದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 182 ರನ್ಗಳನ್ನು ಕಲೆಹಾಕಿತು. ಗುಜರಾತ್ ಪರ ಸೋಫಿ ಡಿವೈನ್ 3 ವಿಕೆಟ್ ಪಡೆದು ಮಿಂಚಿದರೇ, ಕಶ್ವೇ ಗೌತಮ್ 2 ವಿಕೆಟ್ ಉರುಳಿಸಿದರು.
ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದ ಪರ ಭಾರ್ತಿ ಫುಲ್ಮಾಲಿ 39 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೇ. ಬೆತ್ ಮೂನಿ 27 ರನ್‌ಗಳ ಕೊಡುಗೆ ನೀಡಿದರು. ತನುಜಾ ಕನ್ವರ್ ಕೂಡ 21 ರನ್‌ಗಳ ಕೊಡುಗೆ ನೀಡಿದರು. ಉಳಿದ ಬ್ಯಾಟರ್ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ150 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿ ಪರ ಕನ್ನಡತಿ ಶ್ರೇಯಾಂಕ ಪಾಟೀಲ್ 3.5 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದರು. ಲಾರೆನ್ ಬೆಲ್ ಕೂಡ ಮೂರು ವಿಕೆಟ್‌ಗಳನ್ನು ಪಡೆದರೆ, ಅರುಂಧತಿ ರೆಡ್ಡಿ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಕಿತ್ತರು.

