ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಲೀಸ್ ಸಿಎಂ ಎಂದು ಟೀಕೆ ಮಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಹಿಂದೆ ದೇವೇಗೌಡರು ಸಿದ್ದರಾಮಯ್ಯನವರು ವಿಪಕ್ಷೀಯ ನಾಯಕರಿದ್ದರು ಎಂಬ ಕಾರಣಕ್ಕೆ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಪುಟಕೋಸಿಗೆ ಹೋಲಿಸಿದ್ದರು. ಈಗ ಕುಮಾರಸ್ವಾಮಿ ಅವರು ಎರಡು ಬಾರಿ ಜನರೇ ಮೆಚ್ಚಿ, ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಅದೇ ಸಿದ್ದರಾಮಯ್ಯ ಅವರನ್ನು ಲೀಸ್ ಸಿ.ಎಂ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಆಗಲೀ ವಿರೋಧ ಪಕ್ಷದ ನಾಯಕ ಸ್ಥಾನವಾಗಲಿ, ಅವುಗಳಿಗೆ ಸಂವಿಧಾನಿಕವಾದ ಘನತೆ ಇದೆ. ಇಂತಹ ಘನವಾದ ಸ್ಥಾನಗಳ ಬಗ್ಗೆ ನಮ್ಮ ರಾಜ್ಯ ಕಂಡ ಗೌರವಾನ್ವಿತ ಮಾಜಿ ಪ್ರಧಾನಿಗಳು ಮತ್ತು ಗೌರವಾನ್ವಿತ ಕೇಂದ್ರ ಸಚಿವರು ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಬಹುಮುಖ್ಯವಾಗಿ ಹಿಂದುಳಿದ ವರ್ಗದ ವ್ಯಕ್ತಿಗಳನ್ನು ಅವಮಾನಿಸುವ ಇವರ ಕ್ಷುಲ್ಲಕ್ಕ ಮತ್ತು ಅಸೂಯೆಯ ನಡೆಯನ್ನು ಇವರು ತಿದ್ದಿಕೊಂಡು, ಜನರ ಮನ್ನಣೆ ಪಡೆಯಲು ಅವರ ಪರವಾಗಿ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

