ಬೆಂಗಳೂರು: ರಾಜ್ಯದಲ್ಲಿ ಹೆಚ್ವುತ್ತಿರುವ ಮರ್ಯಾದಾ ಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಮಹತ್ಬದ ಮಸೂದೆಯೊಂದನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಮಸೂದೆಯಲ್ಲಿ ಮರ್ಯಾದೆಹತ್ಯೆ ಹಾಗೂ ಸಂಬಂಧಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಹೊಸ ಕಾನೂನಿನ ಪ್ರಕಾರ, ಮರ್ಯಾದಾ ಹತ್ಯೆ ಆಧಾರಿತ ಅಪರಾಧ ಎಸಗುವವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ಕರ್ನಾಟಕ ವಿವಾಹ ಸ್ವಾತಂತ್ರ್ಯ ಮತ್ತು ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ನಿಷೇಧ ಮಸೂದೆ-2026 ಎಂಬ ಹೊಸ ಮಸೂದೆ ತರಲು ಸರ್ಕಾರ ಮುಂದಾಗಿದ್ದು, ಇದು ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಾನ್ಯ ಎಂಬ ಗರ್ಭಿಣಿ ಯುವತಿ ಪರಿಶಿಷ್ಟ ಜಾತಿ ಹುಡುಗನನ್ನು ಮದುವೆಯಾದ ಕಾರಣಕ್ಕೆ ತಂದೆಯಿಂದಲೇ ಕೊಲೆಗೀಡಾಗಿದ್ದರು. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ರಾಜ್ಯಾದ್ಯಂತ ಸದ್ದು ಮಾಡಿತ್ತಲ್ಲದೆ, ಇಂತಹ ಹತ್ಯೆಗಳ ತಡೆಗೆ ವಿಶೇಷ ಕಾನೂನು ಜಾರಿಗೆ ತರುವಂತೆ ಆಗ್ರಹ ವ್ಯಕ್ತವಾಗಿತ್ತು.
ಮಸೂದೆ ಪ್ರಕಾರ, ಮರ್ಯಾದೆ, ಗೌರವದ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಒಬ್ಬರಿಗೆ ಗಂಭೀರ ಹಾನಿಯನ್ನುಂಟು ಮಾಡುವವರಿಗೆ ಕನಿಷ್ಠ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದು ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ.ದಂಡದವರೆಗೆ ವಿಸ್ತರಿಸಬಹುದು. ಸಂತ್ರಸ್ತರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದರೆ, ಅಪರಾಧಿಗಳಿಗೆ 3 ವರ್ಷ ಜೈಲು ಮತ್ತು 2 ಲಕ್ಷ ರು. ದಂಡ ವಿಧಿಸಲಾಗುತ್ತದೆ.
ಒಂದು ವೇಳೆ ಸಾವು ಸಂಭವಿಸಿದ್ದರೆ, ಭಾರತೀಯ ಜ್ಞಾನ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಶಿಕ್ಷೆ ಜತೆಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೆ, ಅಂತರ್ಜಾತಿ ಪ್ರೀತಿಯಲ್ಲಿ ವಿವಾಹದ ಸುಳ್ಳು ಭರವಸೆ ನೀಡುವ ಮೂಲಕ ಲೈಂಗಿಕ ಸಂಪರ್ಕ ಬೆಳೆಸುವುದನ್ನು ಅಪರಾಧ ಎಂದು ಪರಿಗಣಿಸಿ, ಕನಿಷ್ಠ 5 ವರ್ಷ ಕಠಿಣ ಶಿಕ್ಷೆ, ಜೀವಾವಧಿ ಶಿಕ್ಷೆ ಮತ್ತು ದಂಡದವರೆಗೆ ವಿಸ್ತರಿಸಬಹುದು.

