ಸುದ್ದಿ

ಜನವರಿ 29ಕ್ಕೆ ಸಾರಿಗೆ ನೌಕರರ ‘ಬೆಂಗಳೂರು ಚಲೋ’ ಪ್ರತಿಭಟನೆ: ಬಸ್ ಸೇವೆಗೆ ಅಡ್ಡಿಯಾಗುವ ಸಾಧ್ಯತೆ

Share It

ಕರ್ನಾಟಕದಲ್ಲಿ ಮತ್ತೆ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಬೇಡಿಕೆಗಳಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಜನವರಿ 29, 2026ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ಘೋಷಿಸಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಕಳೆದ ಕೆಲವು ತಿಂಗಳಿಂದ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ಮಾತುಕತೆ ನಡೆದರೂ ಫಲಕಾರಿಯಾಗಿಲ್ಲ ಎಂಬ ಅಸಮಾಧಾನ ನೌಕರರಲ್ಲಿ ಹೆಚ್ಚಾಗಿದೆ. ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಈ ಹೋರಾಟಕ್ಕೆ ಕರೆ ನೀಡಲಾಗಿದ್ದು, ಬೇಡಿಕೆಗಳು ಈಡೇರದಿದ್ದರೆ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿವೆ. ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಂಟಿ ಕ್ರಿಯಾ ಸಮಿತಿಯು ಅಧಿಕೃತ ಪತ್ರವನ್ನೂ ರವಾನಿಸಿದೆ.

ನೌಕರರ ಮುಖ್ಯ ಅಸಮಾಧಾನಗಳು ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ಹಣಕ್ಕೆ ಸಂಬಂಧಿಸಿದೆ. 2024ರ ಜನವರಿಯಿಂದ ಜಾರಿಯಾಗಬೇಕಿದ್ದ ಹೊಸ ವೇತನ ವ್ಯವಸ್ಥೆ ಇನ್ನೂ ಅನುಷ್ಠಾನವಾಗಿಲ್ಲ. ಒಟ್ಟು 38 ತಿಂಗಳ ವೇತನ ಬಾಕಿ ಪಾವತಿಸಬೇಕು, ಸರ್ಕಾರಿ ನೌಕರರಿಗೆ ದೊರೆಯುವ ಮಟ್ಟದ ವೇತನ ಸಮಾನತೆ ಕಲ್ಪಿಸಬೇಕು, ಕೆಲಸದ ಸ್ಥಳದಲ್ಲಿ ಕಿರುಕುಳ ನಿಲ್ಲಬೇಕು ಮತ್ತು ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ರಾಜ್ಯದ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1.15 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರು ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಜನವರಿ 29ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಎಲ್ಲ ನೌಕರರೂ ಈ ಹೋರಾಟದಲ್ಲಿ ಭಾಗವಹಿಸಿದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಸೇವೆಗಳಿಗೆ ಅಡಚಣೆ ಎದುರಾಗಬಹುದು ಎಂಬ ಆತಂಕ ಪ್ರಯಾಣಿಕರಲ್ಲಿ ಮೂಡಿದೆ. ಆದರೆ ಪ್ರತಿಭಟನೆಯ ರೂಪುರೇಷೆ ಹಾಗೂ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ಪ್ರತಿಭಟನೆಗೂ ಮುನ್ನ ಸರ್ಕಾರ ಮಧ್ಯಪ್ರವೇಶ ಮಾಡಿ ನೌಕರರ ಬೇಡಿಕೆಗಳಿಗೆ ಪರಿಹಾರ ನೀಡುತ್ತದೆಯೇ, ಅಥವಾ ಕಾನೂನು ಕ್ರಮದ ಎಚ್ಚರಿಕೆ ನೀಡುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಚಳಿಗಾಲದ ಅಧಿವೇಶನದ ಬಳಿಕ ಮತ್ತೆ ಆರಂಭವಾಗುತ್ತಿರುವ ಈ ಹೋರಾಟ, ಈ ಬಾರಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ತರುವ ಉದ್ದೇಶದಿಂದಲೇ ರೂಪುಗೊಂಡಿದೆ ಎಂದು ಸಾರಿಗೆ ವಲಯದಲ್ಲಿ ಚರ್ಚೆ ನಡೆಯುತ್ತಿದೆ.


Share It

You cannot copy content of this page