ಫ್ಯಾಷನ್ ಸಿನಿಮಾ ಸುದ್ದಿ

ವಿವಾದಗಳಿಂದ ಫಿನಾಲೆಯವರೆಗೆ: ಅಶ್ವಿನಿ ಗೌಡ ಟಾಪ್-3 ತಲುಪಿದ ಹಿಂದಿನ ನಿಜವಾದ ಕಾರಣವೇನು?

Share It

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಸ್ಪರ್ಧಿಗಳಲ್ಲಿ ಅಶ್ವಿನಿ ಗೌಡ ಮೊದಲ ಸಾಲಿನಲ್ಲಿ ನಿಂತರು. ನಿರಂತರ ವಿವಾದಗಳು, ತಪ್ಪು ನಿರ್ಧಾರಗಳು ಮತ್ತು ಟೀಕೆಗಳ ನಡುವೆಯೇ ಅವರು ಎಲ್ಲ ಅಡೆತಡೆಗಳನ್ನು ದಾಟಿ ಟಾಪ್-3 ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಫಿನಾಲೆ ವೇದಿಕೆಯಲ್ಲಿ ಅಶ್ವಿನಿ, ತಾವು 2ನೇ ರನ್ನರ್ ಅಪ್ ಹಂತದವರೆಗೆ ತಲುಪಲು ಕಾರಣವಾದ ಅಂತರಂಗದ ಸತ್ಯವನ್ನು ಮೊದಲ ಬಾರಿಗೆ ಹಂಚಿಕೊಂಡರು.

16 ವಾರಗಳ ದೀರ್ಘ ಬಿಗ್ ಬಾಸ್ ಪಯಣದಲ್ಲಿ ಏರುಪೇರುಗಳನ್ನು ಹೆಚ್ಚು ಅನುಭವಿಸಿದ ಸ್ಪರ್ಧಿ ಅಶ್ವಿನಿಯೇ ಎನ್ನಬಹುದು. ಮನೆ ಪ್ರವೇಶಿಸಿದ ದಿನದಿಂದಲೇ ಒಂದಾದ ಮೇಲೆ ಒಂದಾಗಿ ಎದುರಾದ ವಿವಾದಗಳು ಅವರನ್ನು ಸದಾ ಸುದ್ದಿಯಲ್ಲಿರಿಸಿವೆ. ಆದರೂ, ಎಲ್ಲ ಟೀಕೆಗಳನ್ನು ಮೀರಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಅವರೊಂದಿಗೆ ಫಿನಾಲೆಯ ಅಂತಿಮ ಹಂತಕ್ಕೆ ಪೈಪೋಟಿ ನೀಡುವ ಮಟ್ಟಿಗೆ ಅವರು ಬೆಳೆದಿದ್ದಾರೆ.

ನಿಯಮ ಉಲ್ಲಂಘನೆಗಳಿಂದ ಟೀಕೆಯ ವರೆಗೆ
ಒಟ್ಟು 24 ಸ್ಪರ್ಧಿಗಳ ಪೈಕಿ ಅಶ್ವಿನಿ ಮಾಡಿದಷ್ಟು ತಪ್ಪುಗಳು ಇನ್ನಾರಿಗೂ ಆಗಿಲ್ಲ ಎಂಬ ಅಭಿಪ್ರಾಯವೂ ಇದೆ. ಜಗಳ, ಅಸಭ್ಯ ಭಾಷೆ, ಮೈಕ್ ಇಲ್ಲದೆ ಮಾತನಾಡುವುದು, ಸಹ ಸ್ಪರ್ಧಿಗಳ ಕುಟುಂಬದವರನ್ನು ಉಲ್ಲೇಖಿಸಿ ಮಾತನಾಡಿದ ಘಟನೆಗಳು ಅವರಿಗೆ ಹಲವು ಬಾರಿ ಸಂಕಷ್ಟ ತಂದವು. ಇದರ ಪರಿಣಾಮವಾಗಿ ‘ಕಳಪೆ’ ಪಟ್ಟ, ಜೈಲು ಶಿಕ್ಷೆ ಮತ್ತು ಕಿಚ್ಚ ಸುದೀಪ್ ಅವರ ಕಠಿಣ ಎಚ್ಚರಿಕೆಗಳನ್ನು ಅವರು ಎದುರಿಸಬೇಕಾಯಿತು.

ವಿಶೇಷವಾಗಿ ರಕ್ಷಿತಾ ಶೆಟ್ಟಿ ಕುರಿತು ಬಳಸಿದ ವಿವಾದಾತ್ಮಕ ಪದ ದೊಡ್ಡ ಮಟ್ಟದ ಪ್ರತಿಕ್ರಿಯೆಗೆ ಕಾರಣವಾಯಿತು. ಈ ವಿಚಾರವಾಗಿ ಹೊರಗಿನ ಮಟ್ಟದಲ್ಲಿಯೂ ದೂರುಗಳು ದಾಖಲಾಗಿದ್ದು, ಶೋ ಬಳಿಕ ಕಾನೂನು ಪ್ರಕ್ರಿಯೆ ಎದುರಿಸಬೇಕಾದ ಸ್ಥಿತಿ ಅಶ್ವಿನಿಗೆ ಎದುರಾಗುವ ಸಾಧ್ಯತೆ ಇದೆ. ಆದರೂ, ಅವರ ಆಟದ ಶೈಲಿ ಇತರ ಕೆಲವು ಸ್ಪರ್ಧಿಗಳಿಗಿಂತ ವಿಭಿನ್ನವಾಗಿತ್ತು ಎಂದು ಅಭಿಮಾನಿಗಳ ಒಂದು ವರ್ಗ ಅಭಿಪ್ರಾಯಪಟ್ಟಿದೆ.

ಟಾಪ್-3 ತಲುಪಿದ ರಹಸ್ಯ ಬಹಿರಂಗ
ಫಿನಾಲೆ ವೇಳೆ ಅಶ್ವಿನಿಯ ಬಿಗ್ ಬಾಸ್ ಜರ್ನಿಯ ವೀಡಿಯೋ ಪ್ರದರ್ಶನಗೊಂಡಾಗ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡರು. ‘ಮನೆಯಲ್ಲಿ ನಾನು ಮಾಡಿದ ಪ್ರತಿಯೊಂದು ತಪ್ಪನ್ನೂ ಅದೇ ಸ್ಥಳದಲ್ಲಿ ತಿದ್ದಿಕೊಳ್ಳಲು ಪ್ರಯತ್ನಿಸಿದೆ. ತಪ್ಪು ಮರುಕಳಿಸದಂತೆ ನೋಡಿಕೊಂಡೆ. ಎಲ್ಲರೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದನ್ನು ಕಲಿತದ್ದೇ ನನ್ನ ದೊಡ್ಡ ಗೆಲುವು’ ಎಂದು ಅವರು ಭಾವನಾತ್ಮಕವಾಗಿ ಹೇಳಿದರು.

ಬದಲಾವಣೆ ತಂದ ಯಶಸ್ಸು
ಆರಂಭದಲ್ಲಿ ಹಠ, ಕಠಿಣ ನಿಲುವು ಮತ್ತು ಗೊಂದಲಗಳಿಂದ ಗುರುತಿಸಿಕೊಂಡಿದ್ದ ಅಶ್ವಿನಿ, ಸಮಯದೊಂದಿಗೆ ತಮ್ಮ ವರ್ತನೆ ಬದಲಿಸಿಕೊಂಡರು. ಟಾಸ್ಕ್‌ಗಳಲ್ಲಿ ಆಗಿದ ತಪ್ಪುಗಳಿಂದ ಪಾಠ ಕಲಿತು, ಸಹ ಸ್ಪರ್ಧಿಗಳೊಂದಿಗೆ ಹೊಂದಾಣಿಕೆ ಸಾಧಿಸಲು ಮಾಡಿದ ಪ್ರಯತ್ನವೇ ಅವರಿಗೆ ಜನರ ಬೆಂಬಲ ತಂದಿತು. ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿದ ಮನಸ್ಥಿತಿಯೇ ಅಶ್ವಿನಿ ಗೌಡರನ್ನು ವಿನ್ನರ್ ರೇಸ್‌ನ ಅಂತಿಮ ಹಂತದವರೆಗೆ ತಂದು ನಿಲ್ಲಿಸಿತು.


Share It

You cannot copy content of this page