ಬೆಂಗಳೂರು: ರಾಜ್ಯದ 23 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಪಟ್ಟಿ ಸಿದ್ಧವಾಗಿದ್ದು, ಸಚಿವರ ಅನುಮೋದನೆಗೆ ರವಾನಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಆಡಳಿತಾಧಿಕಾರಿಗಳ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ. ಅಲ್ಲದೆ, 28 ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಪ್ರಕಟಿಸಲಾಗಿದೆ. ಅಂತಿಮ ಮೀಸಲಾತಿ ಪಟ್ಟಿಯನ್ನು ಬಳಿಕ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದು ವಕೀಲರು ತಿಳಿಸಿದರು.
ಈ ಅಂಶ ದಾಖಲಿಸಿಕೊಂಡಿರುವ ನ್ಯಾಯಪೀಠ, ಮೀಸಲಾತಿ ಪಟ್ಟಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿರಲಿವೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು. ಸರ್ಕಾರ 10 ದಿನಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಅರ್ಜಿದಾರರು ತಮ್ಮ ಆಕ್ಷೇಪಣೆ ಲಿಖಿತವಾಗಿ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿ, ವಿಚಾರಣೆ ಮುಂದೂಡಿತು.

