ಹೊಸಕೋಟೆ : ಸಮಾಜದ ಉನ್ನತಿಗೆ ತತ್ವಪದಗಳು ಮತ್ತು ಕೀರ್ತನೆಗಳ ಮೂಲಕ ಶ್ರಮಿಸಿದ ಅನೇಕ ಸಾಧು–ಸಂತರ ಸಾಲಿನಲ್ಲಿ ಮಹಾಯೋಗಿ ವೇಮನರು ಪ್ರಮುಖ ಸ್ಥಾನ ಹೊಂದಿದ್ದಾರೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರೆಡ್ಡಿ ಜನಸಂಘದ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನರ 614ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣ, ಕನಕದಾಸರು, ಪುರಂದರದಾಸರು ಸೇರಿ ಅನೇಕ ಮಹನೀಯರು ಸರಳ ಕೀರ್ತನೆಗಳು ಹಾಗೂ ತತ್ವಪದಗಳ ಮೂಲಕ ಸಮಾಜದ ಅಸಮಾನತೆ ತಿದ್ದುವ ಕಾರ್ಯ ಮಾಡಿದ್ದಾರೆ. ಅದೇ ರೀತಿ ವೇಮನರೂ ಕೂಡ ಆಳವಾಗಿ ಬೇರುಬಿಟ್ಟ ಜಾತಿ ವ್ಯವಸ್ಥೆ ತಿರಸ್ಕರಿಸಿ, ಸಾಮಾಜಿಕ ಸುಧಾರಣೆ ಮತ್ತು ಸರ್ವಸಮಾನತೆ ಸಂದೇಶವನ್ನು ಸರಳ ಪದ್ಯಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದರು.

ಮಾನವ ಜನ್ಮದಲ್ಲಿ ಹುಟ್ಟಿರುವ ನಾವು ವೇಮನರ ಸರಳ ಪದ್ಯಗಳನ್ನು ಓದಿ, ಅರ್ಥೈಸಿಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸರ್ಕಾರವೂ ವೇಮನ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ವರ್ಷಕ್ಕೆ ಆಚರಿಸುವ ಮಹನೀಯರ ಜಯಂತಿಗಳ ಪೈಕಿ ಹೆಚ್ಚಿನ ಜಯಂತಿಗಳನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ರೆಡ್ಡಿ ಸಮುದಾಯಕ್ಕೆ ಅನುಕೂಲವಾಗುವಂತೆ ಅನಗೋಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಗುರುತಿಸಿ ಕನಿಷ್ಠ 20 ಗುಂಟೆ ಜಾಗವನ್ನು ಭವನ ನಿರ್ಮಾಣಕ್ಕಾಗಿ ನೀಡಲಾಗುವುದು. ನಗರದಲ್ಲಿಯೂ ವೇಮನರ ಪ್ರತಿಮೆ ಸ್ಥಾಪನೆಗೆ ಸೂಕ್ತ ಸ್ಥಳ ಗುರುತಿಸಲಾಗುವುದು ಎಂದರು.

ಮಹಾಯೋಗಿ ವೇಮನರು ಸಮ ಸಮಾಜ ನಿರ್ಮಾಣದ ಕನಸು ಕಂಡವರು. ಅವರ ಆಶಯಗಳನ್ನು ಸಾಕಾರಗೊಳಿಸುವ ಹೊಣೆ ಎಲ್ಲರ ಮೇಲಿದೆ. ತಾಲ್ಲೂಕಿನಲ್ಲಿ ಸಹಕಾರಿ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ರೆಡ್ಡಿ ಸಮುದಾಯಕ್ಕೆ ಸೂಕ್ತ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ರೆಡ್ಡಿ ಜನಸಂಘದ ನಿರ್ದೇಶಕ ಎನ್.ಎನ್. ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಗ್ರಾಮದ ಅಭಿವೃದ್ಧಿ, ವಿಧಾನಸೌಧದ ಮುಂದೆ ಅವರ ಪ್ರತಿಮೆ ಸ್ಥಾಪನೆ, ವೇಮನ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರವೂ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಶೇಖರ್‌ರೆಡ್ಡಿ, ನಿರ್ದೇಶಕರು, ವಿವಿಧ ಪದಾಧಿಕಾರಿಗಳು, ಸಮಾಜದ ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

