ಇಂದೋರ್‌ನ ಬೀದಿಗಳಲ್ಲಿ ವರ್ಷಗಳಿಂದ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಅಂಗವಿಕಲ ವ್ಯಕ್ತಿಯ ಜೀವನ ಕಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾಲುಗಳಿಗೆ ಸ್ವಾಧೀನವಿಲ್ಲದ ಕಾರಣ ನಡೆದುಕೊಳ್ಳಲಾಗದ ಈ ವ್ಯಕ್ತಿ, ಜೀವನ ಸಾಗಿಸಲು ಭಿಕ್ಷಾಟನೆಯನ್ನೇ ಅವಲಂಬಿಸಿದ್ದಾನೆ ಎಂದು ಜನರು ಭಾವಿಸಿದ್ದರು. ಆದರೆ ವಾಸ್ತವದಲ್ಲಿ ಆತ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿಕೊಂಡು, ಆಸ್ತಿ ಸಂಪತ್ತು ಗಳಿಸಿರುವುದು ಇತ್ತೀಚಿನ ತನಿಖೆಯಿಂದ ಬಹಿರಂಗವಾಗಿದೆ.
ಹುಟ್ಟಿನಿಂದಲೇ ದೈಹಿಕ ಅಸಮರ್ಥತೆಯನ್ನು ಎದುರಿಸುತ್ತಿದ್ದ ಮಂಗಿಲಾಲ್ ಎಂಬ ಈ ವ್ಯಕ್ತಿಗೆ ಶಿಕ್ಷಣ ಪಡೆಯಲು ಅವಕಾಶ ದೊರೆಯಲಿಲ್ಲ. ವ್ಹೀಲ್ಚೇರ್‌ನಲ್ಲೇ ದಿನನಿತ್ಯವನ್ನು ಕಳೆಯುತ್ತಿದ್ದ ಆತ, ಬದುಕಿಗಾಗಿ ಭಿಕ್ಷಾಟನೆಗೆ ಇಳಿದನು. ಆದರೆ ಆತ ಎಂದಿಗೂ ಯಾರನ್ನೂ ನೇರವಾಗಿ ಭಿಕ್ಷೆ ಕೇಳುತ್ತಿದ್ದಿಲ್ಲ. ಜನಸಂದಣಿಯಲ್ಲಿ ಮೌನವಾಗಿ ಕುಳಿತುಕೊಳ್ಳುವುದು ಅಥವಾ ನಿಧಾನವಾಗಿ ಚಲಿಸುವುದನ್ನು ನೋಡಿದ ದಾರಿಹೋಕರು ಸ್ವಯಂ ಪ್ರೇರಣೆಯಿಂದ ಹಣ ನೀಡುತ್ತಿದ್ದರು. ದಿನಕ್ಕೆ ಸರಾಸರಿ 500 ರಿಂದ 1,000 ರೂಪಾಯಿ ತನಕ ಆತನಿಗೆ ಬರುತ್ತಿತ್ತು.
ಕಾಲಕ್ರಮೇಣ, ಈ ಹಣವನ್ನು ಮಂಗಿಲಾಲ್ ಸೂಕ್ತವಾಗಿ ಬಳಸಿಕೊಂಡಿದ್ದಾನೆ. ಇಂದಿಗೆ ಆತನ ಹೆಸರಿನಲ್ಲಿ ಮೂರು ಮನೆಗಳಿದ್ದು, ಮೂರು ಆಟೋ-ರಿಕ್ಷಾಗಳ ಮಾಲೀಕತ್ವವೂ ಇದೆ. ಆ ಆಟೋಗಳಿಗೆ ಚಾಲಕರನ್ನು ನೇಮಿಸಲಾಗಿದ್ದು, ಬಾಡಿಗೆಯಿಂದ ನಿಯಮಿತ ಆದಾಯ ಬರುತ್ತಿದೆ. ಇದಲ್ಲದೆ, ಒಂದು ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಕೂಡ ಆತನ ಬಳಿ ಇದ್ದು, ಅದಕ್ಕೂ ಸಂಬಳದ ಚಾಲಕನಿದ್ದಾನೆ. ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ಉಳಿವು, ಯಾವುದೇ ಸಾಲದ ಭಾದೆ ಇಲ್ಲ ಎಂಬುದೂ ತಿಳಿದುಬಂದಿದೆ.
ಸರಾಫಾ ಬಜಾರ್ ಪ್ರದೇಶದಲ್ಲಿ ಮಂಗಿಲಾಲ್‌ನ್ನು ವರ್ಷಗಳಿಂದ ನೋಡುತ್ತಿದ್ದವರು, ಆತ ಇಷ್ಟೊಂದು ಆಸ್ತಿ ಹೊಂದಿದ್ದಾನೆ ಎಂಬುದನ್ನು ಊಹಿಸಿಯೂ ಇರಲಿಲ್ಲ. ಇತ್ತೀಚೆಗೆ ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಕ್ಷಣಾ ತಂಡವು ಭಿಕ್ಷಾಟನೆ ವಿರೋಧಿ ಅಭಿಯಾನದ ಭಾಗವಾಗಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಎಲ್ಲ ವಿವರಗಳು ಹೊರಬಂದವು. ವಿಚಾರಣೆ ವೇಳೆ, ಭಗತ್ ಸಿಂಗ್ ನಗರದಲ್ಲಿ ಮೂರು ಅಂತಸ್ತಿನ ಮನೆ, ಶಿವನಗರದಲ್ಲಿ ಇನ್ನೊಂದು ಮನೆ ಹಾಗೂ ಪಿಎಂಎವೈ ಯೋಜನೆಯಡಿ ಅಲ್ವಾಸಾದಲ್ಲಿ ಒಂದು ಬೆಡ್‌ರೂಮ್ ಫ್ಲಾಟ್ ಹೊಂದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ಇದಕ್ಕಿಂತಲೂ ಮಹತ್ವದ ಸಂಗತಿ ಎಂದರೆ, ಮಂಗಿಲಾಲ್ ಭಿಕ್ಷಾಟನೆಯಿಂದ ಬಂದ ಹಣವನ್ನು ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಬಡ್ಡಿಗೆ ಸಾಲವಾಗಿ ನೀಡುತ್ತಿದ್ದಾನೆ ಎಂಬ ಆರೋಪ. ದೈನಂದಿನ ಹಾಗೂ ಸಾಪ್ತಾಹಿಕವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದನೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಆತನ ಒಟ್ಟು ಆಸ್ತಿ, ಬ್ಯಾಂಕ್ ಖಾತೆಗಳು ಹಾಗೂ ಆದಾಯದ ಮೂಲಗಳ ಬಗ್ಗೆ ಈಗ ಸಮಗ್ರ ತನಿಖೆ ನಡೆಯುತ್ತಿದೆ.
ಅಧಿಕಾರಿಗಳ ಪ್ರಕಾರ, ಈಗಾಗಲೇ ಸಾಕಷ್ಟು ಆಸ್ತಿ ಹೊಂದಿದ್ದರೂ ಸರ್ಕಾರಿ ಗೃಹ ಯೋಜನೆಯ ಲಾಭವನ್ನು ಹೇಗೆ ಪಡೆದನು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಮಂಗಿಲಾಲ್‌ನ್ನು ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗುವುದು. ಭಿಕ್ಷಾಟನೆ ಮತ್ತು ಅಕ್ರಮ ಬಡ್ಡಿ ವ್ಯವಹಾರವನ್ನು ಉತ್ತೇಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮಂಗಿಲಾಲ್ ತನ್ನ ಪೋಷಕರೊಂದಿಗೆ ಅಲ್ವಾಸಾದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾನೆ. ಇಂದೋರ್ ನಗರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ಉದ್ದೇಶದಿಂದ ಆರಂಭಿಸಿದ ಈ ವಿಶೇಷ ಅಭಿಯಾನದಲ್ಲಿ ಸಾವಿರಾರು ಜನರನ್ನು ಗುರುತಿಸಿ, ಅನೇಕ ಮಂದಿಗೆ ಸರ್ಕಾರದ ಯೋಜನೆಗಳ ಮೂಲಕ ಪುನರ್ವಸತಿ ಕಲ್ಪಿಸಲಾಗಿದೆ. ಮಂಗಿಲಾಲ್ ಪ್ರಕರಣವು, ಭಿಕ್ಷಾಟನೆಯ ಹಿಂದೆ ಮರೆಮಾಚಿಕೊಂಡಿರುವ ಮತ್ತೊಂದು ವಾಸ್ತವದ ಮುಖವನ್ನು ಸಮಾಜದ ಮುಂದೆ ತೆರೆದಿಟ್ಟಿದೆ.

