ಬೆಂಗಳೂರು: ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರಿ ಕರ್ತವ್ಯದಲ್ಲಿ, ಸಮವಸ್ತ್ರದಲ್ಲಿ ಇರುವಾಗಲೇ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದೆ. ಡಾ.ರಾಮಚಂದ್ರರಾವ್ ಅವರ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಅಸಭ್ಯವಾಗಿ ವರ್ತಿಸಿರುವುದು ಸರ್ಕಾರಕ್ಕೆ ಮೇಲ್ನೋಟಕ್ಕೆ ಮನವರಿಕೆಯಾಗಿದೆ. ಈ ಪ್ರಕರಣದಿಂದ ಸರ್ಕಾರಕ್ಕೂ ಮುಜುಗರವಾಗಿದೆ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ ತಿಳಿಸಿದ್ದಾರೆ.
ಡಾ.ರಾಮಚಂದ್ರರಾವ್ ಅಖಿಲ ಭಾರತ ಸೇವಾ ನಿಯಮ 1968ರ ರೂಲ್ 3ರನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಮನವರಿಕೆಯಾಗಿದೆ ಎಂದೂ ಸರ್ಕಾರ ತಿಳಿಸಿದೆ. ಅಖಿಲ ಭಾರತ ಸೇವಾ ನಿಯಮಗಳಡಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಕುರಿತಂತೆ ತನಗಿರುವ ಅಧಿಕಾರ ಪ್ರಯೋಗಿಸಿ ರಾಮಚಂದ್ರರಾವ್ ವಿರುದ್ಧ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ರಾಜ್ಯ ಸರ್ಕಾರ ಅಮಾನತು ಮಾಡಿದೆ ಎಂದು ಡಿಪಿಎಆರ್ ಅಧೀನ ಕಾರ್ಯದರ್ಶಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

