ರಾಜಕೀಯ ಸುದ್ದಿ

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ

Share It

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರಾಧ್ಯಕ್ಷರಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

45 ವರ್ಷವಷ್ಟೇ ವಯಸ್ಸಾಗಿರುವ ನಬಿನ್, ಕೆಲ ತಿಂಗಳ ಹಿಂದೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲಿ 5ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ನಬಿನ್ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಲಾಯಿತು. ಅವರ ಉಮೇದುವಾರಿಕೆಯನ್ನು ಪ್ರಸ್ತಾಪಿಸಿದವರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು.

ಡಿ.14ರಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಬಿನ್, ಬಿಹಾರ ಸರ್ಕಾರದ ಕಾನೂನು ಮತ್ತು ನ್ಯಾಯ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಜೆ.ಪಿ.ನಡ್ಡಾ ಉತ್ತರಾಧಿಕಾರಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವರಾ ನಡ್ಡಾ 2020 ರಿಂದ ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದರು.

ಬಿಜೆಪಿ ಪಕ್ಷ ಸ್ಥಾಪನೆಯಾದ 1980 ರಲ್ಲಿ ನಿತಿನ್ ರಾಂಚಿಯಲ್ಲಿ ಜನಿಸಿದ್ದರು. ಇದೀಗ ಅದೇ ಪಕ್ಷದ ಚುಕ್ಕಾಣಿ ಹಿಡಿದಿರುವುದು ವಿಶೇಷ. ನಿತಿನ್ ತಂದೆ ಬಿಜೆಪಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ನಿಧನದ ನಂತರ 2006 ರಲ್ಲಿ ರಾಜಕೀಯ ಪಾದಾರ್ಪಣೆ ಮಾಡಿದರು. ಆ ವರ್ಷ ನಿತಿನ್ ಮೊದಲ ಬಾರಿಗೆ ಉಪಚುನಾವಣೆಯಲ್ಲಿ ಗೆದ್ದಿದ್ದರು.

2010, 2015, 2020 ಮತ್ತು 2025 ರಲ್ಲಿ ಶಾಸಕರಾಗಿ ಗೆದ್ದರು. ನಿತಿನ್ ವಿವಿಧ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಯುವ ಮೋರ್ಚಾದಿಂದ ಬಂದ ಅವರು, ಪ್ರಭಾವಿ ನಾಯಕರಾಗಿ ಬೆಳೆದರು. 2023 ರಲ್ಲಿ ಛತ್ತೀಸ್‌ಗಢ ಚುನಾವಣೆ ಉಸ್ತುವಾರಿ ವಹಿಸಿದ್ದರು. ಅಲ್ಲೇ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಲೋಕಸಭಾ ಚುನಾವಣೆಯಲ್ಲೂ ಅವರು ಯಶಸ್ಸಿನ ಸೂತ್ರ ಪುನರಾವರ್ತಿಸಿದ್ದರು. ಛತ್ತೀಸ್‌ಗಢದ11 ಸ್ಥಾನಗಳ ಪೈಕಿ 10 ರಲ್ಲಿ ಬಿಜೆಪಿ ಗೆದ್ದಿತ್ತು.


Share It

You cannot copy content of this page