ಬೆಂಗಳೂರು: ನಟ ಸುದೀಪ್ ಮತ್ತು ಅವರ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ಮೂಲದ ಕಾಫಿ ತೋಟದ ಮಾಲೀಕ ದೀಪಕ್ ಎಂಬುವವರು ದೂರು ನೀಡಿದ್ದು, ಸುದೀಪ್ ಮತ್ತು ಅವರ ಮ್ಯಾನೇಜರ್ ಚಂದ್ರಚೂಡ್ ಅವರು ತಮಗೆ 90 ಲಕ್ಷ ನೀಡುವುದಾಗಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಾರಾಸ್ದಾರ ದಾರವಾಹಿ ಶೂಟಿಂಗ್ಗಾಗಿ ಕಾಫಿ ತೋಟ ಮತ್ತು ಮನೆಯನ್ನು ಎರಡು ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡು ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಎರಡೇ ತಿಂಗಳಿಗೆ ಖಾಲಿ ಮಾಡಿದ್ದ ಚಿತ್ರತಂಡ ಹಣ ಪಾವತಿ ಮಾಡಿರಲಿಲ್ಲ ಎಂದು ದೂರಿದ್ದಾರೆ.
ಎರಡು ತಿಂಗಳಲ್ಲಿ ಶೂಟಿಂಗ್ ಮಾಡುವ ಸಲುವಾಗಿ ಕಾಫಿ ತೋಟ ಹಾಗೂ ಮರಗಳನ್ನು ನಾಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೀಪಕ್ ದೂರು ನೀಡಿದು, 95 ಲಕ್ಷ ರು. ಪರಿಹಾರ ನೀಡುವಂತೆ ಕೇಳಿದ್ದರು. ಆ ವೇಳೆ ರಾಜಿ ಮಾಡಿಕೊಂಡಿದ್ದ ಸುದೀಪ್, 60 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದ್ದರು.
ಸುದೀಪ್ ಭರವಸೆಯಂತೆ ದೂರು ವಾಪಸ್ ಪಡೆದಿದ್ದ ದೀಪಕ್ಗೆ ಸುದೀಪ್ 10 ಲಕ್ಷ ರು.ಗಳ ಚೆಕ್ ಮಾತ್ರವೇ ನೀಡಿದ್ದರು. ಆದರೆ, ಇನ್ನುಳಿದ ಹಣವನ್ನು ನೀಡದೆ ಸತಾಯಿಸುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ಒದಗಿಸಬೇಕು ಎಂದು ದೀಪಕ್ ದೂರಿನಲ್ಲಿ ತಿಳಿಸಿದ್ದಾರೆ.

