ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆಗಾಗ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿರುವ ಆನೆಗಳು, ಇದೀಗ ಧರ್ಮಸ್ಥಳ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲ ಕಾಲ ವಾಹನ ಸವಾರರ ಆತಂಕವನ್ನು ಹೆಚ್ಚಿಸಿದ್ದವು.
ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇಷ್ಟು ದಿನ ಕಾಫಿ, ಅಡಿಕೆ, ಬಾಳೆ, ಮೆಣಸಿನ ತೋಟಕ್ಕೆ ಲಗ್ಗೆ ಇಟ್ಟು ಸಂಪೂರ್ಣ ಹಾನಿ ಮಾಡುತ್ತಿದ್ದವು. ಈಗ ಪ್ರಮುಖ ರಸ್ತೆಗಳಿಗೆ ಬಂದು ಕಾಡಾನೆಗಳು ನಿಲ್ಲುತ್ತಿವೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ೨ನೇ ತಿರುವಿನಲ್ಲಿ ರಾಜಾರೋಷವಾಗಿ ಒಂಟಿ ಸಲಗವೊಂದು ಸುಳಿದಾಡುತ್ತಿರುವುದು ಕಂಡುಬAದಿದೆ. ಹೀಗಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ರಸ್ತೆಯಲ್ಲಿ ಒಂಟಿ ಸಲಗದ ಓಡಾಟದಿಂದ ವಾಹನ ಸವಾರರು ಗಲಿಬಿಲಿ ಆಗಿದ್ದರು. ರಸ್ತೆ ಬಿಟ್ಟು ಒಂಟಿ ಸಲಗ ಕದಲದ ಹಿನ್ನೆಲೆ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಕೆಲ ಕಾಲ ವಾಹನ ಸವಾರರು, ಬೈಕ್ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಾರದ ಅರಣ್ಯ ಸಿಬ್ಬಂದಿ ವಿರುದ್ಧ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಾಗ್ಗೆ ರಾಷ್ಟ್ರೀಯ ಹೆದ್ದಾರಿಗೆ ಈ ಕಾಡಾನೆ ಎಂಟ್ರಿ ಕೊಡುತ್ತಿದ್ದು, ದಕ್ಷಿಣ ಕನ್ನಡ-ಚಿಕ್ಕಮಗಳೂರು ಗಡಿಭಾಗದ ಚಾರ್ಮಾಡಿ ಘಾಟ್ನ ರಸ್ತೆ ಕಾಡಾನೆಗಳ ಕಾರಿಡಾರ್ ಆಗುತ್ತಿದೆ. ಕೂಡಲೇ ಅರಣ್ಯ ಇಲಾಖೆ, ಸರ್ಕಾರ ಮತ್ತೆ ಕಾಡಾನೆಗಳು ಪ್ರಮುಖ ರಸ್ತೆಗಳಿಗೆ ಬಂದು ನಿಲ್ಲದ ಹಾಗೆ ಕ್ರಮ ಜರುಗಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.