ಪರ್ತ್ (ಆಸ್ಟ್ರೇಲಿಯಾ) ಇಲ್ಲಿನ ಪ್ರತಿಷ್ಠಿತ ಬಿಗ್ ಭಾಷ್ ಲೀಗ್ನ ಸೆಮಿಫೈನಲ್ ಪಂದ್ಯದ ವೇಳೆ ಪರ್ತ್ ನ ಆಫ್ಟಸ್ ಸ್ಟೇಡಿಯಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಪ್ರೇಕ್ಷಕರ ಆತಂಕಕ್ಕೆ ಕಾರಣವಾಗಿತ್ತು.
ಸಿಡ್ನಿ ಸಿಕ್ಸರ್ಸ್ ಮತ್ತು ಪರ್ತ್ ಸ್ನೂಕರ್ಸ್ ನಡುವಿನ ಪಂದ್ಯದ ವೇಳೆ 16 ನೇ ಓವರ್ ನಡುವಲ್ಲಿ ಸ್ಟೇಡಿಯಂ ನ ಒಂದು ಗೇಟ್ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತು. ತಕ್ಷಣವೇ ಪ್ರೇಕ್ಷಕರು ಗಾಬರಿಯಾದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ವೈರಲ್ ಕೂಡ ಆಯಿತು.
ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಮತ್ತು ಸ್ಟೇಡಿಯಂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಯಾವುದೇ ತೊಂದರೆಗಳಾಗಿಲ್ಲ ಎಂದು ವರದಿಯಾಗಿದೆ. ಪಂದ್ಯವೂ ಕೂಡ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ.
ಪ್ರೇಕ್ಷಕರು ಬಿಸಾಡಿದ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಂತಹ ವಸ್ತುಗಳಿಗೆ ಬೆಂಕಿ ತಗುಲಿದ ಪರಿಣಾಮ ಹೊಗೆ ಕಾಣಿಸಿಕೊಂಡಿದೆ. ಆದರೆ, ತಕ್ಷಣವೇ ಸಿಬ್ಬಂದಿ ಎಚ್ಚೆತ್ತುಕೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ. ಸ್ಟೇಡಿಯಂನಲ್ಲಿ ಇದ್ದ ಪ್ರೇಕ್ಷಕರು ಕೂಡ ಗಾಬರಿಯಾಗದಂತೆ ನಿಗಾ ವಹಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.

