ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮಹತ್ವದ ಅವಕಾಶವನ್ನು ನೀಡಿದೆ. ನಬಾರ್ಡ್ 2026ರ ನೇಮಕಾತಿ ಪ್ರಕ್ರಿಯೆಯಡಿ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ಒಟ್ಟು 162 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಮೂಲಕ ಆರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು nabard.org ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯನ್ನು ಗ್ರೂಪ್ ‘ಬಿ’ ಕೇಡರ್ ಅಡಿಯಲ್ಲಿ ನಡೆಸಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ವಿವಿಧ ನಬಾರ್ಡ್ ಕಚೇರಿಗಳಿಗೆ ನಿಯೋಜಿಸಲಾಗುತ್ತದೆ. ಪ್ರಸ್ತುತ ಸಂಕ್ಷಿಪ್ತ ಅಧಿಸೂಚನೆ ಮಾತ್ರ ಪ್ರಕಟವಾಗಿದ್ದು, ಸಂಪೂರ್ಣ ವಿವರಗಳೊಂದಿಗೆ ಜಾಹೀರಾತು ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ನಬಾರ್ಡ್ ತಿಳಿಸಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಅಭಿವೃದ್ಧಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ ಅಥವಾ ಬಿಕಾಂ ಪದವಿಯನ್ನು ಪಡೆದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕರಿಗೆ ಕೇವಲ ಪದವಿ ಪಡೆದಿದ್ದರೆ ಸಾಕಾಗುತ್ತದೆ.
ಅಭಿವೃದ್ಧಿ ಸಹಾಯಕ (ಹಿಂದಿ) ಹುದ್ದೆಗೆ ಅರ್ಜಿ ಹಾಕುವವರು ಹಿಂದಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಹಿಂದಿ–ಇಂಗ್ಲಿಷ್ ಭಾಷಾಂತರದಲ್ಲಿ ಉತ್ತಮ ಹಿಡಿತ ಇರಬೇಕು.
ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷವಾಗಿರಬೇಕು. ಸರ್ಕಾರದ ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ. ಈ ಮಾಹಿತಿಗಳು ಹಿಂದಿನ ನೇಮಕಾತಿ ಅಧಿಸೂಚನೆಯನ್ನು ಆಧರಿಸಿವೆ; ಅಂತಿಮ ವಿವರಗಳು ಸಂಪೂರ್ಣ ಅಧಿಸೂಚನೆಯಲ್ಲಿ ಸ್ಪಷ್ಟವಾಗಲಿವೆ.
ಆಯ್ಕೆ ವಿಧಾನ
ನಬಾರ್ಡ್ ಅಭಿವೃದ್ಧಿ ಸಹಾಯಕ ನೇಮಕಾತಿ ಪ್ರಕ್ರಿಯೆ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತಾ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಹಿಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಎಲ್ಲಾ ಹಂತಗಳ ಫಲಿತಾಂಶ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ನಬಾರ್ಡ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ‘Careers’ ವಿಭಾಗದಲ್ಲಿರುವ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಮೊದಲ ಬಾರಿ ಅರ್ಜಿ ಹಾಕುವವರು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಹಾಗೂ ಅರ್ಜಿ ಶುಲ್ಕ ಪಾವತಿಸಬೇಕು. ಮುಂದಿನ ಹಂತಗಳಿಗಾಗಿ ಅರ್ಜಿ ನಮೂನೆಯ ಪ್ರತಿಯನ್ನು ಉಳಿಸಿಕೊಂಡಿರಲು ಸೂಚಿಸಲಾಗಿದೆ.

