ಬೆಂಗಳೂರು: ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡದಿರಲು ರಾಜ್ಯಪಾಲರು ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ರಾಜ್ಯಪಾಲರು ಮತ್ತು ಸರಕಾರದ ನಡುವೆ ಕಾನೂನು ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ನರೇಗಾ ಹೆಸರು ಬದಲಾವಣೆಯನ್ನು ವಿರೋಧಿಸಿ, ಜಂಟಿ ಅಧಿವೇಶನದ ಮೂಲಕ ಕೇಂದ್ರ ಸರಕಾರಕ್ಕೆ ಠಕ್ಕರ್ ಕೊಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯಪಾಲರು ಈ ಅಧಿವೇಶನದಲ್ಲಿ ಸರಕಾರದ ಪರವಾಗಿ ಭಾಷಣ ಮಾಡಿದರೆ, ಕೇಂದ್ರ ಸರಕಾರಕ್ಕೆ ಮುಜುಗರವಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ಭಾಷಣ ಮಾಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಆದರೆ, ರಾಜ್ಯಪಾಲರ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅವಕಾಶವನ್ನು ರಾಜ್ಯ ಸರಕಾರ ಮುಕ್ತವಾಗಿರಿಸಿಕೊಂಡಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದು ಅವರ, ಕರ್ತವ್ಯಗಳಡಿ ಬರುತ್ತದೆ. ಹೀಗಿದ್ದೂ ನಿರಾಕರಣೆ ಮಾಡಿದ್ದಲ್ಲಿ ನ್ಯಾಯಾಲಯದಲ್ಲಿ ಅವರ ನಡೆಯನ್ನು ಪ್ರಶ್ನಿಸಲು ಅವಕಾಶವಿದೆ.
ಹೀಗಾಗಿ, ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಮೂಲಗಳ ಪ್ರಕಾರ ಅವರು ಭಾಷಣ ಮಾಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಭಾಷಣ ಮಾಡದಿರಲು ತೀರ್ಮಾನಿಸಿದರೆ, ಕಾನೂನು ಸಂಘರ್ಷ ಸೃಷ್ಟಿಯಾಗಲಿದೆ.
ನೆನ್ನೆಯಷ್ಟೇ ತಮಿಳುನಾಡಿನಲ್ಲಿ ರಾಷ್ಟçಗೀತೆ ಹಾಡುವ ವಿಚಾರಕ್ಕೆ ತಮಿಳುನಾಡು ಸರಕಾರ ಮತ್ತು ಅಲ್ಲಿ ರಾಜ್ಯಪಾಲರ ನಡುವೆ ಸಂಘರ್ಷ ಸೃಷ್ಟಿಯಾಗಿದೆ. ಇದೀಗ ಕರ್ನಾಟಕವೂ ಅದೇ ಹಾದಿಯನ್ನು ಹಿಡಿಯಲಿದೆ. ಈ ನಡುವೆ ದಕ್ಷಿಣ ಭಾರತದ ರಾಜ್ಯಗಳ ಸಿಎಂ ಸಭೆಯನ್ನು ಕರೆಯಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದು, ಇದು ಕೇಂದ್ರ ಸರಕಾರದ ವಿರುದ್ಧದ ಹೋರಾಟಕ್ಕೆ ವೇದಿಕೆಯಾಗುವ ಸಾಧ್ಯತೆಗಳಿವೆ.

