ಪುತ್ತೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆಯೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿಯೇ ರವಿ ಎಂಬ 35 ವರ್ಷದ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ರವಿ ವಿಚಾರಣೆಗೆ ಹಾಜರಾಗಿದ್ದ. ಈ ವೇಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವನೆಯ ನಂತರ ರವಿ ವಾಂತಿ ಮಾಡಿಕೊಂಡಿದ್ದು, ತಕ್ಷಣವೇ ಆತನನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅನಂತರ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಯಿತು.
ಕಾವು ಸಮೀಪದ ಮಣಿಯಡ್ಕದ ನಿವಾಸಿಯಾದ ರವಿ ಎಂಬುವವರಿಗೆ ವಿದ್ಯಾಶ್ರೀ ಎಂಬಾಕೆಯ ಜತೆಗೆ ವಿವಾಹವಾಗಿತ್ತು. ಆದರೆ, ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. 2 ವರ್ಷದ ಹಿಂದೆ ರವಿ ಹೆಂಡತಿಯ ಕತ್ತು ಹೊಸುಕಿ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾಶ್ರೀ ಆತನ ವಿರುದ್ಧ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಅನಂತರ ಈ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಈ ಕಾರಣದಿಂದ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ನಡೆಯುವ ವೇಳೆಯಲ್ಲಿಯೇ ರವಿ ವಿಷ ಕುದಿದಿದ್ದಾನೆ.

