ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು, 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.
ತಾತ್ಕಾಲಿಕ ಜಪ್ತಿಗೊಂಡ ಆಸ್ತಿಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆಗೊಂಡ 6 ಮುಡಾ ನಿವೇಶನಗಳು, 3 ಇತರೆ ಮಾದರಿ ಆಸ್ತಿಗಳು ಹಾಗೂ ಒಂದು ವಾಣಿಜ್ಯ ಕಟ್ಟಡ ಸೇರಿವೆ. ಜನವರಿ 21ರಂದು ದಾಳಿ ನಡೆಸಿದ ಇಡಿ ಅಧಿಕಾರಿಗಳು ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಿನಲ್ಲಿ ದಾಖಲಾಗಿದ್ದ ಮುಡಾ ಪ್ರಕರಣದ ಎಫ್‌ಐಆರ್ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಭೂಸ್ವಾಧೀನಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆ) ನಿಯಮಗಳು2009 (2015ರ ತಿದ್ದುಪಡಿ ಸಹಿತ) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಯಂ ಭೂಸರಣಿ ಪ್ರೋತ್ಸಾಹ ಯೋಜನೆ) ನಿಯಮಗಳು 1991ರ ಘೋರ ಉಲ್ಲಂಘನೆಯೊಂದಿಗೆ ನಿವೇಶನ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ ಹೇಳಿದೆ.
ಇದೇ ವೇಳೆ, ಮುಡಾ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವಿನ ಸಂಬಂಧ ಹಾಗೂ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಹಾಗೂ ಲೇಔಟ್ ಅನುಮೋದನೆಗಾಗಿ ನಗದು ಪಾವತಿ ನಡೆದಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇ.ಡಿ ತಿಳಿಸಿದೆ.
ಇದಕ್ಕೂ ಮುನ್ನ, ಇ.ಡಿ 283 ಕಾನೂನುಬಾಹಿರ ಮುಡಾ ನಿವೇಶನಗಳು ಮತ್ತು ಮೂರು ಜನರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿತ್ತು. ನಿವೇಶನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು 16.09.2025ರಂದು ಪಿಎಂಎಲ್‌ಎ ಅಡಿಯಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈವರೆಗೆ ಈ ಪ್ರಕರಣದಲ್ಲಿ ಸುಮಾರು 460 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

