ಅಪರಾಧ ಸುದ್ದಿ

ಪ್ರೀತಿ ಮದುವೆಗೆ ವಿರೋಧ: ಉತ್ತರ ಪ್ರದೇಶದಲ್ಲಿ ಯುವ ದಂಪತಿ ಹತ್ಯೆ, ಸಹೋದರರ ಬಂಧನ

Share It

ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ಪ್ರೀತಿ ಮದುವೆಗೆ ವಿರೋಧವಾಗಿ ನಡೆದ ಭೀಕರ ಘಟನೆಯಲ್ಲಿ ಯುವ ದಂಪತಿಯನ್ನು ಹತ್ಯೆ ಮಾಡಿ, ಶವಗಳನ್ನು ಹೊಲದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿಯ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಗೀಡಾದವರು ಕಾಜಲ್ ಹಾಗೂ ಆಕೆಯ ಪತಿ ಅರ್ಮಾನ್. ಕಳೆದ ಮೂರು ದಿನಗಳಿಂದ ಇಬ್ಬರೂ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ನೀಮ್ ಕರೋಲಿ ಬಾಬಾ ದೇವಸ್ಥಾನದ ಸಮೀಪದ ಹೊಲವೊಂದರಲ್ಲಿ ಗುಂಡಿ ತೋಡಿ ಹೂತ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಪ್ರಾಥಮಿಕ ತನಿಖೆಯಲ್ಲಿ ಇದು ಮರ್ಯಾದಾ ಹತ್ಯೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ಕಾಜಲ್ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಾಗ, ಭಯಾನಕ ಸತ್ಯ ಬಹಿರಂಗವಾಗಿದೆ. ಕಾಜಲ್ ಮತ್ತು ಅರ್ಮಾನ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬದ ವಿರೋಧದ ನಡುವೆಯೇ ಮದುವೆಯಾಗಿದ್ದರು.

ಯುವತಿಯ ಪೋಷಕರು ಈ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಆರೋಪಿಗಳ ಹೇಳಿಕೆಯಂತೆ, ಕೋಪದ ಆವೇಶದಲ್ಲಿ ಕಾಜಲ್‌ನ ಸಹೋದರರು ದಂಪತಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವಗಳನ್ನು ಹೊಲದಲ್ಲಿ ಹೂತು ಹಾಕಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟನೆಯು ಸ್ಥಳೀಯವಾಗಿ ತೀವ್ರ ಆಘಾತ ಮೂಡಿಸಿದೆ.


Share It

You cannot copy content of this page